ಕರ್ನಾಟಕ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಖಾಲೀದ್ ಎಂ ಮೋದಿ ಇನ್ನಿಲ್ಲ ಬೆಂಗಳೂರು: ಕರ್ನಾಟಕ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಮತ್ತು ಅಂತರರಾಷ್ಟ್ರೀಯ ಹಾಕಿ ಕೋಚ್ ಖಾಲೀದ್ ಎಂ ಮೋದಿ (61) ಬುಧವಾರ ನಿಧನರಾದರು. 1980 ಮತ್ತು 90ರ ದಶಕದಲ್ಲಿ ತಮ್ಮ ಗೋಲ್‌ಕೀಪಿಂಗ್‌ ಚಾಕಚಾಕ್ಯತೆಯ ಮೂಲಕ ಹೆಸರಾಗಿದ್ದ ಖಾಲೀದ್ ಅವರಿಗೆ ವಿಶ್ವಕಪ್ ಮತ್ತು ಒಲಿಂಪಿಕ್ ಟೂರ್ನಿಗಳಲ್ಲಿ ಆಡುವ ಭಾರತ ತಂಡಗಳಲ್ಲಿ ಹಲವು ಅವಕಾಶಗಳು ಕೊಂಚದರಲ್ಲಿ ತಪ್ಪಿದ್ದವು. ಖಾಲೀದ್ ಕರ್ನಾಟಕ ಮತ್ತು ಕೆನರಾ ಬ್ಯಾಂಕ್ ತಂಡದ ಗೋಲ್‌ಕೀಪರ್ ಆಗಿದ್ದರು. ಅಲ್ಲದೇ ರಾಜ್ಯ ತಂಡಕ್ಕೆ ಕೋಚ್ ಕೂಡ ಆಗಿದ್ದರು. ಭಾರತದಲ್ಲಿ ಅವರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಲು ಹೆಚ್ಚು ಅವಕಾಶ ಸಿಗದ ಕಾರಣ ಕತಾರ್ ತಂಡಕ್ಕೆ ತರಬೇತುದಾರರಾಗಿದ್ದರು. ಅಲ್ಲಿಯ ತಂಡವು ಅಂತರರಾಷ್ಟ್ರೀಯ ಉತ್ತಮ ಸಾಧನೆ ಮಾಡುವ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾದ ಖಾಲೀದ್ ಬೆಂಗಳೂರಿಗೆ ಮರಳಿದ್ದರು. ‘1983ರಲ್ಲಿ ಕೆನ್ಯಾ ಪ್ರವಾಸ ಮಾಡಿದ್ದ ಭಾರತ ಜೂನಿಯರ್ ಹಾಕಿ ತಂಡದಲ್ಲಿ ನಾನು ಮತ್ತು ಖಾಲೀದ್ ಜೊತೆಗೆ ಇದ್ದೆವು. ಆ ಟೂರ್ನಿಯಲ್ಲಿ ಅವರು ಅದ್ಭುತವಾಗಿ ಕೀಪಿಂಗ್ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅವರು ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವರು ಎಂಬ ಭರವಸೆ ನಮ್ಮೆಲ್ಲರಲ್ಲೂ ಮೂಡಿತ್ತು’ ಎಂದು ಒಲಿಂಪಿಯನ್ ಹಾಕಿ ಆಟಗಾರ ಜೂಡ್ ಫೆಲಿಕ್ಸ್ ನೆನಪಿಸಿಕೊಂಡರು. ‘ಆದರೆ ವಿಷಾದದ ಸಂಗತಿಯೆಂದರೆ, ಭಾರತ ಹಾಕಿ ತಂಡವು ಅವರ ಪ್ರತಿಭೆಯನ್ನು ಬಳಸಿಕೊಳ್ಳಲಿಲ್ಲ. ಖಾಲೀದ್ ನನ್ನ ಸ್ನೇಹಿತನೆಂಬ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಆ ಕಾಲಘಟ್ಟದಲ್ಲಿ ಖಾಲೀದ್ ಆಟವನ್ನು ನೋಡಿದವರೆಲ್ಲರ ಭಾವನೆಯೂ ಇದೇ ಆಗಿತ್ತು. ಖಾಲೀದ್ ಅಪಾರ ಜಾಣ್ಮೆ ಮತ್ತು ಸಭ್ಯ ವ್ಯಕ್ತಿತ್ವದ ಆಟಗಾರನಾಗಿದ್ದರು. ವಿಶ್ವಕಪ್, ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ ಕೂಟಗಳಿಗೆ ತೆರಳುವ ತಂಡಗಳ ಆಯ್ಕೆ ಸಂದರ್ಭದಲ್ಲಿ ಖಾಲೀದ್ ಹೆಸರು ಕೇಳಿಬರುತ್ತಿತ್ತು. ಆದರೆ ಅದೇನೊ ಗೊತ್ತಿಲ್ಲ. ಬಳಗದಲ್ಲಿ ಮಾತ್ರ ಅವರಿರುತ್ತಿರಲಿಲ್ಲ’ ಎಂದು ಜೂಡ್ ಹೇಳಿದರು. ‘ಅವರಿಗೆ ಯಾರೂ ಗಾಡ್‌ಫಾದರ್ ಇರದ ಕಾರಣ ತಂಡದಲ್ಲಿ ಸ್ಥಾನ ಲಭಿಸಿಲಿಲ್ಲ ಎಂದು ನನಗನಿಸುತ್ತದೆ. ನಾವು ಆಡುತ್ತಿದ್ದ ಕಾಲದಲ್ಲಿ ಎಷ್ಟೋ ಆಟಗಾರರು ತಮ್ಮ ಗಾಡ್‌ಫಾದರ್‌ಗಳಿಂದಾಗಿಯೇ ತಂಡದಲ್ಲಿ ಸ್ಥಾನ ಪಡೆದಿರುತ್ತಿದ್ದರು. ಖಾಲೀದ್‌ಗೆ ಭಾರತ ತಂಡದಲ್ಲಿ ಆಡುವ ಸಕಲ ಅರ್ಹತೆಮತ್ತು ಸಾಮರ್ಥ್ಯ ಇತ್ತು’ ಎಂದು ಬೇಸರ ವ್ಯಕ್ತಪಡಿಸಿದರು. ಖಾಲೀದ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ‘ಕರ್ನಾಟಕದಲ್ಲಿ ಹಾಕಿ ಕ್ರೀಡೆಗೆ ಖಾಲೀದ್ ನೀಡಿದ ಕೊಡುಗೆಯು ಅಸಾಧಾರಣವಾದದ್ದು’ ಎಂದು ರಾಜ್ಯ ಹಾಕಿ ಸಂಸ್ಥೆಯ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಸ್ಮರಿಸಿದರು. ಗುರುಮೂರ್ತಿ ನಿಧನ ಕರ್ನಾಟಕ ಹಾಕಿ ತಂಡದ ಮತ್ತೊಬ್ಬ ಗೋಲ್‌ ಕೀಪರ್ ಎಂ.ಪಿ ಗುರುಮೂರ್ತಿ (67) ಹೃದಯಾಘಾತದಿಂದ ಬುಧವಾರ ನಿಧನರಾದರು. ಅವರದ್ದು ಹಾಕಿಪಟುಗಳ ಕುಟುಂಬ. ಮೂರ್ತಿಯವರ ತಂದೆ ಪದವಟೆ ಅವರು ರಾಷ್ಟ್ರೀಯ ತಂಡಕ್ಕೆ ಆಡಿದ್ದರು. ಅಣ್ಣ ಸತ್ಯಮೂರ್ತಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.