ಕುಸ್ತಿ ಫೆಡರೇಶನ್‌ ಚುನಾವಣೆ: ಡಿಸೆಂಬರ್ 8ರ ಬಳಿಕ ದಿನಾಂಕ ಘೋಷಣೆ ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ)ಗೆ ಚುನಾವಣೆ ನಡೆಸಲು ಅಧಿಸೂಚನೆಯನ್ನು ಡಿಸೆಂಬರ್ 8 ಅಥವಾ ನಂತರ ಹೊರಡಿಸಬಹುದು. ಈ ವರ್ಷದ ಆರಂಭದಲ್ಲಿ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಸೇರಿಸಲು ದಿನಾಂಕ ನಿಗದಿಪಡಿಸಲಾಗಿದೆ. ಡಬ್ಲ್ಯುಎಫ್‌ಐಗೆ ಚುನಾವಣೆ ನಡೆಸುವುದಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್‌ ಇತ್ತೀಚೆಗಷ್ಟೇ ತೆರವು ಮಾಡಿದ್ದು, ಹೊಸ ಡಬ್ಲ್ಯುಎಫ್ಐ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆಗೆ ದಾರಿ ಸುಗಮಗೊಂಡಿದೆ. ಏಳು ಮಂದಿ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಶರಣ್ ಸಿಂಗ್ ನೇತೃತ್ವದ ಫೆಡರೇಶನ್ ಅನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ ಬಳಿಕ ವುಶು ಅಸೋಸಿಯೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದಲ್ಲಿ ಅಡ್‌ಹಾಕ್‌ ಸಮಿತಿಯನ್ನು ಭಾರತ ಒಲಿಂಪಿಕ್‌ ಸಂಸ್ಥೆ ರಚಿಸಿದ್ದು, ಈ ಸಮಿತಿ ಅಂದಿನಿಂದ ಡಬ್ಲ್ಯುಎಫ್ಐನ ದೈನಂದಿನ ಚಟುವಟಿಕೆ ನಿರ್ವಹಿಸುತ್ತಿದೆ. ಸುಪ್ರೀಕೋರ್ಟ್‌ ಚುನಾವಣೆಗೆ ಹಾದಿ ಸುಗಮಗೊಳಿಸುತ್ತಿದ್ದಂತೆ, ಚುನಾವಣಾಧಿಕಾರಿ, ನಿವೃತ್ತ ನ್ಯಾಯಮೂರ್ತಿ ಎಂ.ಎಂ.ಕುಮಾರ್ ಅವರು ನವೆಂಬರ್ 30ರಂದು ಸಭೆ ನಡೆಸಿ, ಜುಲೈ 25ರಂದು ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಏನಾದರೂ ಬದಲಾವಣೆ ಇದೆಯೇ ಎಂಬುದರ ಬಗ್ಗೆ ಭೂಪೇಂದರ್ ಸಿಂಗ್‌ ಬಾಜ್ವಾ ಅವರನ್ನು ಕೇಳಿದ್ದಾರೆ. ‘ಜುಲೈ 25ರಂದು ಅಧಿಸೂಚನೆ ಹೊರಡಿಸಲಾದ ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇದ್ದರೆ ತಿಳಿಸುವಂತೆ ಚುನಾವಣಾ ಅಧಿಕಾರಿ ಅವರು ಬಾಜ್ವಾ ಅವರನ್ನು ಕೇಳಿದ್ದಾರೆ. ಅದಕ್ಕೆ ಬಜ್ವಾ ಅವರು ಒಂದು ವಾರ ಕಾಲಾವಕಾಶ ಕೋರಿದ್ದಾರೆ. ಚುನಾವಣೆ ನಡೆಸಲು ಅಂತಿಮ ಅಧಿಸೂಚನೆ ಹೊರಡಿಸಲು 5 ದಿನಗಳಲ್ಲಿ ಅಂದರೆ ಡಿಸೆಂಬರ್ 8 ರಂದು ಅಥವಾ ಅದಕ್ಕೂ ಮೊದಲು ಸಂಪೂರ್ಣ ಮಾಹಿತಿ ಒದಗಿಸಬೇಕು’ ಎಂದು ಸಹಾಯಕ ಚುನಾವಣಾಧಿಕಾರಿ ತಪಸ್ ಭಟ್ಟಾಚಾರ್ಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.