ಕುವೆಂಪು ವಿ.ವಿ ಅಂತರ ಕಾಲೇಜು ಕ್ರೀಡಾಕೂಟ: ಗೌತಮ್, ಅಕ್ಷತಾ ವೇಗದ ರಾಜ, ರಾಣಿ ಶಿವಮೊಗ್ಗ: ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯವಾದ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಕಾಲೇಜು ಕ್ರೀಡಾಕೂಟ ಅಥ್ಲೆಟಿಕ್ಸ್‌ನಲ್ಲಿ ಮೂರು ನೂತನ ದಾಖಲೆಗಳು ಒಡಮೂಡಿದವು. 100 ಮೀಟರ್ ಓಟದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿ ಕೆ.ಗೌತಮ್ ನೂತನ ದಾಖಲೆ ಬರೆದರು. ನಿಗದಿತ ಗುರಿಯನ್ನು 10.50 ಸೆಕೆಂಡ್‌ನಲ್ಲಿ ಪೂರ್ಣಗೊಳಿಸಿದ ಗೌತಮ್, ಕಳೆದ ವರ್ಷ ಇದೇ ಕ್ರೀಡಾಕೂಟದಲ್ಲಿ ಡಿವಿಎಸ್ ಪದವಿ ಕಾಲೇಜಿನ ವಿದ್ಯಾರ್ಥಿ ಧನಂಜಯ (10.70 ಸೆಕೆಂಡ್) ಮಾಡಿದ್ದ ದಾಖಲೆ ಮುರಿದರು. 10.77 ಸೆಕೆಂಡ್‌ನಲ್ಲಿ ಗುರಿಮುಟ್ಟಿ ದ್ವಿತೀಯ ಸ್ಥಾನ ಪಡೆದ ಧನಂಜಯಗೆ ಕಳೆದ ವರ್ಷದ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಳ್ಳಲು ಆಗಲಿಲ್ಲ. ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಮನೋಜ್ (10.99) ತೃತೀಯ ಸ್ಥಾನ ಪಡೆದರು. ಪುರುಷರ ವಿಭಾಗದ ಹೈಜಂಪ್‌ನಲ್ಲಿ ಡಿವಿಎಸ್‌ ಕಾಲೇಜಿನ ಸುದೀಪ್ 2.07 ಮೀಟರ್ ಎತ್ತರ ಹಾರಿ, ಈ ಹಿಂದೆ ಶಂಕರಘಟ್ಟದ ಜ್ಞಾನಸಹ್ಯಾದ್ರಿ ಕ್ಯಾಂಪಸ್‌ನ ರವಿ (1.82 ಮೀಟರ್) ದಾಖಲೆಯನ್ನು ಮುರಿದರು. ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪೇಂದ್ರ ನಾಯ್ಕ 1.80 ಮೀಟರ್ ಎಸೆದು ದ್ವಿತೀಯ ಸ್ಥಾನ ಪಡೆದರು. ಶೃಂಗೇರಿ ಜೆಸಿಬಿಎಂ ಕಾಲೇಜಿನ ಪಿ.ಆದರ್ಶ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಹಿಳೆಯರ ಹ್ಯಾಮರ್ ಥ್ರೋನಲ್ಲಿ ಡಿವಿಎಸ್ ಕಾಲೇಜಿನ ಮೇಘನಾ 37.73 ಮೀಟರ್ ದೂರ ಭರ್ಜಿ ಎಸೆದು, ತಮ್ಮದೇ ಹೆಸರಿನಲ್ಲಿದ್ದ (36 ಮೀಟರ್) ದಾಖಲೆ ಮುರಿದರು. ಸಾಗರದ ಇಂದಿರಾಗಾಂಧಿ ಪ್ರಥಮ ದರ್ಜೆ ಕಾಲೇಜಿನ ಎಂ.ಶೋಭಾ ದ್ವಿತೀಯ ಹಾಗೂ ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿ.ಪ್ರೀತಿ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದ 100 ಮೀಟರ್ ಓಟದಲ್ಲಿ ಡಿವಿಎಸ್ ಕಾಲೇಜಿನ ಎಸ್.ಎಸ್. ಅಕ್ಷತಾ ಚಿನ್ನಕ್ಕೆ ಮುತ್ತಿಕ್ಕಿದರು. ಆ ಮೂಲಕ ಗೌತಮ್ ಹಾಗೂ ಅಕ್ಷತಾ ಕ್ರೀಡಾಕೂಟದಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು. 200 ಮೀಟರ್‌ ಓಟದಲ್ಲೂ ಚಿನ್ನ ಮುಡಿಗೇರಿಸಿಕೊಂಡ ಅಕ್ಷತಾ ಕೂಟದಲ್ಲಿ ಅತ್ಯುತ್ತಮ ಮಹಿಳಾ ಅಥ್ಲಿಟ್ ಶ್ರೇಯಕ್ಕೂ ಪಾತ್ರರಾದರು. ಕ್ರೀಡಾಕೂಟದ ಪುರುಷ ಮತ್ತು ಮಹಿಳೆಯರ ಎರಡೂ ವಿಭಾಗದಲ್ಲಿ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದರಿಂದ ಶಿವಮೊಗ್ಗದ ಡಿವಿಎಸ್ ಪದವಿ ಕಾಲೇಜಿಗೆ ಸಮಗ್ರ ಚಾಂಪಿಯನ್‌ ಶಿಪ್ ಲಭಿಸಿತು. ಪುರುಷ ವಿಭಾಗದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜು ದ್ವಿತೀಯ ಸ್ಥಾನ, ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ತಂಡ ತೃತೀಯ ಸ್ಥಾನ ಪಡೆದರೆ, ಮಹಿಳಾ‌ ವಿಭಾಗದಲ್ಲಿ ಶಂಕರಘಟ್ಟದ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ಕಾಲೇಜಿಗೆ ದ್ವಿತೀಯ ಸ್ಥಾನ, ತೀರ್ಥಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೃತೀಯ ಸ್ಥಾನ ಲಭಿಸಿತು. ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ 87 ಪದವಿ ಕಾಲೇಜುಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 28 ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿಷ್ಣುಮೂರ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಪಿ.ನಾರಾಯಣ್, ಎನ್ಇಎಸ್ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎನ್.ಡಿ.ವಿರೂಪಾಕ್ಷ, ಸ್ನಾತಕೋತ್ತರ ದೈಹಿಕ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ ಗಜಾನನ ಪ್ರಭು, ಎಟಿಎನ್‌ಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ.ಪಿ.ಆರ್.ಮಮತಾ ಬಹುಮಾನ ವಿತರಿಸಿದರು. ಅಥ್ಲೆಟಿಕ್ಸ್ ಫಲಿತಾಂಶ: ಪುರುಷರ ವಿಭಾಗ– 200 ಮೀಟರ್ ಓಟ: ಡಿವಿಎಸ್ ಕಾಲೇಜಿನ ಎಂ.ಡಿ. ದರ್ಶನ್ ಪ್ರಥಮ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಎಂ.ಗೌತಮ್ ದ್ವಿತೀಯ ಬಿ.ಧನಂಜಯ ತೃತೀಯ. 400 ಮೀಟರ್ ಹರ್ಡಲ್ಸ್: ಎಸ್.ಆಕಾಶ್ (ಎಟಿಎನ್‌ಸಿಸಿ ಶಿವಮೊಗ್ಗ) ‍ಪ್ರಥಮ ರಾಜಶೇಖರ್ (ಸಹ್ಯಾದ್ರಿ ವಾಣಿಜ್ಯ ಕಾಲೇಜು) ದ್ವಿತೀಯ ವಿ.ಕಿರಣ್ (ಸಹ್ಯಾದ್ರಿ ವಾಣಿಜ್ಯ ಕಾಲೇಜು) ತೃತೀಯ. 800 ಮೀಟರ್ ಓಟ: ಎಂ.ಎಸ್.ಆರ್ಶಿತ್ (ಡಿವಿಎಸ್ ಕಾಲೇಜು) ಪ್ರಥಮ ವೈ.ಎಸ್.ಸುದರ್ಶನ್ (ಡಿವಿಎಸ್ ಕಾಲೇಜು) ದ್ವಿತೀಯ ವರುಣ್ (ಸಹ್ಯಾದ್ರಿ ವಿಜ್ಞಾನ ಕಾಲೇಜು) ತೃತೀಯ. ಲಾಂಗ್‌ಜಂಪ್: ಮೆಹತಾಬ್ ಅಲಿಖಾನ್ (ಜ್ಞಾನ ಸಹ್ಯಾದ್ರಿ ಶಂಕರಘಟ್ಟ) ಪ್ರಥಮ ಎಚ್.ರಾಘವೇಂದ್ರ (ಡಿವಿಎಸ್ ಕಾಲೇಜು) ದ್ವಿತೀಯ ಸೃಜನ್ (ಜೆಸಿಬಿಎಂ ಸಿರಿಗೇರಿ) ತೃತೀಯ. ಹ್ಯಾಮರ್ ಥ್ರೋ–ಮನೋಜ್ (ಎಸ್‌ಎಸಿಎಸ್‌ಎಂಸಿ) ಪ್ರಥಮ ಸುಮುಖ (ಜಿಎಫ್‌ಜಿಸಿ ತೀರ್ಥಹಳ್ಳಿ) ದ್ವಿತೀಯ ಪೃಥ್ವಿ (ಎಸ್‌ಸಿಸಿ ಶಿವಮೊಗ್ಗ) ತೃತೀಯ. ಮಹಿಳೆಯರ ವಿಭಾಗ– 200 ಮೀಟರ್ ಓಟ: ಅಕ್ಷತಾ (ಡಿವಿಎಸ್ ಕಾಲೇಜು) ಪ್ರಥಮ ಎನ್‌.ಮಮತಾ (ಜ್ಞಾನ ಸಹ್ಯಾದ್ರಿ ಶಂಕರಘಟ್ಟ) ದ್ವಿತೀಯ ವೀಕ್ಷಿತಾ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಿಪ್ಪನ್‌ಪೇಟೆ) ತೃತೀಯ. 400 ಮೀಟರ್ ಹರ್ಡಲ್ಸ್: ಎಂ.ಕೆ.ಪವಿತ್ರಾ (ಜಿಎಫ್‌ಜಿಸಿ ತೀರ್ಥಹಳ್ಳಿ) ಪ್ರಥಮ ಕೆ.ಸನಿಕಾ (ಐಡಿಎಸ್‌ಜಿ ಚಿಕ್ಕಮಗಳೂರು) ದ್ವಿತೀಯ ರಕ್ಷಿತಾ (ಜಿಎಫ್‌ಜಿಸಿ ತೀರ್ಥಹಳ್ಳಿ) ತೃತೀಯ. 800 ಮೀಟರ್ ಓಟ: ಕೆ.ಪಿ.ಮಾನಸಾ ಪ್ರಥಮ ಹರ್ಷಿತಾ ದ್ವಿತೀಯ (ಜ್ಞಾನ ಸಹ್ಯಾದ್ರಿ ಶಂಕರಘಟ್ಟ) ಎಸ್. ವರ್ಷಾ (ಸಹ್ಯಾದ್ರಿ ವಾಣಿಜ್ಯ ಕಾಲೇಜು) ತೃತೀಯ. ಹೈಜಂಪ್: ಚೈತನ್ಯಾ (ಯುಸಿಪಿಇ) ಪ್ರಥಮ ಕವನಾ (ಜಿಎಫ್‌ಜಿಸಿ ತೀರ್ಥಹಳ್ಳಿ) ದ್ವಿತೀಯ ಧನ್ಯಾ ಸಫಾ (ಜೆಸಿಇಬಿಎಂ ಸಿರಿಗೇರಿ) ತೃತೀಯ. ಲಾಂಗ್ ಜಂಪ್: ಭೂಮಿಕಾ (ಡಿವಿಎಸ್ ಕಾಲೇಜು) ಪ್ರಥಮ ಕಾವ್ಯಾ (ಯುಸಿಪಿಇ ಶಿವಮೊಗ್ಗ) ದ್ವಿತೀಯ ವೈಷ್ಣವಿ (ಎನ್‌ಇಎಸ್ಎಎಸ್ ಶಿವಮೊಗ್ಗ) ತೃತೀಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.