ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ಗೆ ರೋಚಕ ಜಯ ಬೆಂಗಳೂರು: ತೀವ್ರ ಹೋರಾಟದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ 32–30 ಪಾಯಿಂಟ್‌ಗಳಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಎರಡನೇ ಜಯ ದಾಖಲಿಸಿತು. ಭರತ್‌ ಮತ್ತು ವಿಕಾಸ್ ಖಂಡೋಲಾ ಕ್ರಮವಾಗಿ 9 ಮತ್ತು 8 ರೈಡಿಂಗ್ ಪಾಯಿಂಟ್ಸ್ ಕಲೆಹಾಕಿದರು. ಸೌರಭ್ ನಂದಾಲ್ ಅವರು ಐದು ಕ್ಯಾಚಿಂಗ್ ಪಾಯಿಂಟ್ಸ್ ಗಳಿಸಿದರು. ಜೈಪುರ ಪರ ವಿ.ಅಜಿತ್ ಕುಮಾರ್ 9 ಟಚ್‌ ಪಾಯಿಂಟ್ಸ್‌ ಪಡೆದರು. ಆದರೆ ಅವರಿಗೆ ರೈಡಿಂಗ್‌ನಲ್ಲಿ ಉಪಯುಕ್ತ ಬೆಂಬಲ ಸಿಗಲಿಲ್ಲ. ನಾಲ್ಕು ನಿಮಿಷಗಳಿರುವಾಗ ಸ್ಕೋರ್‌ 29–29ರಲ್ಲಿ ಸಮನಾಗಿತ್ತು. ಆದರೆ ವಿಕಾಸ್ ಖಂಡೋಲಾ ಅವರ ಬೋನಸ್ ಪಾಯಿಂಟ್‌, ನಂತರ ಸೌರಭ್ ಅವರ ಕ್ಯಾಚಿಂಗ್‌ನಿಂದ ಬೆಂಗಳೂರು 31–29ರಲ್ಲಿ ಮುನ್ನಡೆಯಿತು. ಮರು ರೈಡ್‌ನಲ್ಲಿ ವಿಕಾಸ್‌ ಅವರು ವಿಫಲರಾದರು. ಆದರೆ ಜೈಪುರದ ಕೊನೆಯ ರೈಡಿಂಗ್‌ನಲ್ಲಿ ಅಜಿತ್ ಕುಮಾರ್‌ ಅವರನ್ನು ಬುಲ್ಸ್‌ನ ಅಮನ್ ಮತ್ತು ಸುರ್ಜೀತ್ ಕ್ಯಾಚ್‌ ಮಾಡಿ ಬೆಂಗಳೂರು ತಂಡಕ್ಕೆ ರೋಚಕ ಜಯ ತಂದಿತ್ತರು. ತಮಿಳ್ ತಲೈವಾಸ್‌ಗೆ ಜಯ ದಿನದ ಮೊದಲ ಪಂದ್ಯದಲ್ಲಿ, ನರೇಂದರ್ ಹೋಶಿಯಾರ್ ಅವರ ರೈಡಿಂಗ್ ಮತ್ತು ಸಾಹಿಲ್ ಸಿಂಗ್ ಅವರ ಉತ್ತಮ ಕ್ಯಾಚಿಂಗ್ ಬಲದಿಂದ ತಮಿಳ್ ತಲೈವಾಸ್ ತಂಡ ತೀವ್ರ ಹೋರಾಟದ ನಂತರ 38–36 ಪಾಯಿಂಟ್‌ಗಳಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು. ನರೇಂದರ್ ಸೂಪರ್ ಟೆನ್ (10 ಪಾಯಿಂಟ್) ಗಳಿಸಿದರೆ, ಸಾಹಿಲ್ ಆರು ಟ್ಯಾಕಲ್ ಪಾಯಿಂಟ್‌ ಗಳಿಸಿ ರಕ್ಷಣಾ ವಿಭಾಗದಲ್ಲಿ ಮಿಂಚಿದರು. ಟೈಟನ್ಸ್ ಪರ ಯಾರೊಬ್ಬ ಆಟಗಾರರಿಂದ ಅತ್ಯುತ್ತಮ ಎನ್ನಿಸುವ ಆಟ ಬರಲಿಲ್ಲ. ನಾಯಕ ಪವನ್ ಶೆರಾವತ್ ಐದು ಬೋನಸ್ ಸಹಿತ ಏಳು, ರಾಬಿನ್ ಚೌಧರಿ ಮೂರು ಬೋನಸ್ ಸಹಿತ ಏಳು ಪಾಯಿಂಟ್ಸ್ ಕಲೆಹಾಕಿದರು. ತಮಿಳು ತಲೈವಾಸ್ ಏಳನೇ ಸ್ಥಾನದಲ್ಲಿದ್ದರೆ, ಟೈಟನ್ಸ್ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.