ಟಿಟಿ: ಅರ್ಚನಾಗೆ ಸಿಂಗಲ್ಸ್‌ ಕಿರೀಟ ಬೆಂಗಳೂರು: ಅಗ್ರ ಶ್ರೇಯಾಂಕದ ಅರ್ಚನಾ ಕಾಮತ್‌ ಅವರು ಹರಿಯಾಣದ ಪಂಚಕುಲದಲ್ಲಿ ಗುರುವಾರ ಮುಕ್ತಾಯಗೊಂಡ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯ ಸಿಂಗಲ್ಸ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಪಿಎಸ್‌ಪಿಬಿ (ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರಮೋಷನ್‌ ಬೋರ್ಡ್‌) ಟೇಬಲ್‌ ಟೆನಿಸ್‌ ಅಕಾಡೆಮಿಯನ್ನು ಪ್ರತಿನಿಧಿಸಿದ್ದ ಕರ್ನಾಟಕದ ಅರ್ಚನಾ ಅವರು ಫೈನಲ್‌ನಲ್ಲಿ 11-8, 11-6, 11-8, 7-11, 11-8ರಿಂದ ಎರಡನೇ ಶ್ರೇಯಾಂಕದ ಐಹಿಕಾ ಮುಖರ್ಜಿ (ಆರ್‌ಬಿಐ) ಅವರನ್ನು ಮಣಿಸಿ ಈ ಋತುವಿನಲ್ಲಿ ಎರಡನೇ ಪ್ರಶಸ್ತಿ ಗೆದ್ದರು. ಅರ್ಚನಾ ಅವರು ಸೆಮಿಫೈನಲ್‌ನಲ್ಲಿ 11-9, 11-4, 11-6, 11-6ರಿಂದ ತಮಿಳುನಾಡಿನ ಯಾಶಿನಿ ಶಿವಶಂಕರ್‌ ಅವರನ್ನು ಮಣಿಸಿದ್ದರು. ನವೆಂಬರ್‌ನಲ್ಲಿ ವಡೋದರಾದಲ್ಲಿ ನಡೆದ ರಾಷ್ಟ್ರೀಯ ರ್‍ಯಾಂಕಿಂಗ್‌ ಟೂರ್ನಿಯ ಫೈನಲ್‌ನಲ್ಲಿ ಅರ್ಚನಾ ಕಾಮತ್‌ ಅವರು ಐಹಿಕಾ ಮುಖರ್ಜಿ ವಿರುದ್ಧವೇ ಜಯ ಸಾಧಿಸಿ, ಋತುವಿನ ಮೊದಲ ಪ್ರಶಸ್ತಿ ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.