ಜೂನಿಯರ್ ವಿಶ್ವಕಪ್‌ ಹಾಕಿ: ಭಾರತಕ್ಕೆ ಜರ್ಮನಿ ಸವಾಲು– ಇಂದು ಸೆಮಿಫೈನಲ್‌ ಕ್ವಾಲಾಲಂಪುರ: ಎರಡು ಬಾರಿಯ ಚಾಂಪಿಯನ್ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಪುರುಷರ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಗುರುವಾರ ಎದುರಿಸಲಿದೆ. 2001, 2016ರಲ್ಲಿ ಪ್ರಶಸ್ತಿ ಗೆದ್ದಿರುವ ಭಾರತ ತಂಡವು, 1997ರಲ್ಲಿ ರನ್ನರ್‌ ಅಪ್‌ ಸ್ಥಾನ ಆಗಿತ್ತು. ಇದೀಗ ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸುವ ಹುಮ್ಮಸ್ಸಿನಲ್ಲಿದ್ದಾರೆ. ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡವು ಸಾಂಘಿಕ ‍ಆಟವಾಡಿ 4–3 ಗೋಲುಗಳಿಂದ ವಿಶ್ವದ ನಾಲ್ಕನೇ ರ‍್ಯಾಂಕ್‌ನ ನೆದರ್ಲೆಂಡ್ಸ್ ತಂಡವನ್ನು ರೋಚಕವಾಗಿ ಮಣಿಸಿತ್ತು. ಮಧ್ಯಂತರದ ವೇಳೆ 0–2ರಿಂದ ಹಿನ್ನಡೆಯಲ್ಲಿದ್ದ ಉತ್ತಮ್ ಸಿಂಗ್ ಬಳಗವು ಮೂರನೇ ಕ್ವಾರ್ಟರ್‌ನಲ್ಲಿ ಎರಡು ಗೋಲು ಗಳಿಸಿದರೂ 2–3ರಿಂದ ಹಿಂದೆ ಬಿದ್ದಿತ್ತು. ಕೊನೆಯ ಕ್ವಾರ್ಟರ್‌ನಲ್ಲಿ ಛಲಬಿಡದೆ ಹೋರಾಟ ನಡೆಸಿ, ಮತ್ತೆರಡು ಬಾರಿ ಚೆಂಡನ್ನು ಗುರಿ ಸೇರಿಸುವ ಮೂಲಕ ನಾಲ್ಕರ ಘಟ್ಟ ಪ್ರವೇಶಿಸಿತ್ತು. ಉಪನಾಯಕ ಅರಿಜಿತ್‌ ಸಿಂಗ್ ಹುಂಡಲ್ ಈ ಪಂದ್ಯದಲ್ಲೂ ಎರಡು ಗೋಲು ಗಳಿಸಿ, ಭಾರತದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದ್ದರು. ಭಾರತವು ಈ ವರ್ಷ ನಾಲ್ಕು ಬಾರಿ ಜರ್ಮನಿ ತಂಡವನ್ನು ಎದುರಿಸಿದ್ದು, ಎಲ್ಲಾ ಪಂದ್ಯಗಳಲ್ಲೂ ಭಾರತ ಸೋತಿದೆ. ಸುಲ್ತಾನ್ ಆಫ್ ಜೋಹರ್ ಕಪ್‌ನ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ 3–6ರಿಂದ ಮುಗ್ಗರಿಸಿತ್ತು. ಭುವನೇಶ್ವರದಲ್ಲಿ 2021ರಲ್ಲಿ ನಡೆದ ಪುರುಷರ ಜೂನಿಯರ್ ವಿಶ್ವಕಪ್‌ನ ಸೆಮಿಫೈನಲ್‌ನಲ್ಲೂ ಭಾರತವು ಜರ್ಮನಿ ವಿರುದ್ಧ 2-4ರಿಂದ ಪರಾಭವಗೊಂಡಿತ್ತು. ‘ಈಗ ನಾವು ಒತ್ತಡದಲ್ಲಿಯೂ ಆಡುವುದನ್ನು ಅಭ್ಯಾಸ ಮಾಡಿದ್ದೇವೆ. ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಥವಾ ಸುಲ್ತಾನ್ ಆಫ್ ಜೋಹರ್ ಕಪ್‌ನಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಒತ್ತಡದಲ್ಲಿ ಆಡಿ ಜಯ ಸಾಧಿಸಿದ್ದೇವೆ’ ಎಂದು ನಾಯಕ ಉತ್ತಮ್‌ ಸಿಂಗ್‌ ಹೇಳಿದ್ದಾರೆ. ‘ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನ ಕನಸು ಫೈನಲ್‌ನಲ್ಲಿ ಗೆಲ್ಲುವುದಾಗಿದೆ. ಆ ಗುರಿಯತ್ತ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಈಗ ತಂಡವು ಉತ್ತಮ ಫಾರ್ಮ್‌ನಲ್ಲಿದೆ. ಜರ್ಮನಿಯನ್ನು ಹಲವು ಬಾರಿ ಎದುರಿಸಿರುವುದರಿಂದ ಅದರ ಸಾಮರ್ಥ್ಯ ಮತ್ತು ದೌರ್ಬಲ್ಯ ತಿಳಿದಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತೇವೆ’ ಎಂದು ಉತ್ತಮ್‌ ತಿಳಿಸಿದ್ದಾರೆ. ಭಾರತ ತಂಡದ ಕೋಚ್ ಸಿ.ಆರ್. ಕುಮಾರ್ ಕೂಡ ತಮ್ಮ ಆಟಗಾರರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದು, ಟೂರ್ನಿಯಲ್ಲಿ ಜರ್ಮನಿ ತಂಡ ಅಜೇಯವಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ. ‘ಬಿ’ ಗುಂಪಿನಲ್ಲಿದ್ದ ಜರ್ಮನಿ ತಂಡವು, ಗುಂಪು ಹಂತದ ಪಂದ್ಯದಲ್ಲಿ ಫ್ರಾನ್ಸ್‌ ವಿರುದ್ಧ ಸೋತಿತ್ತು. ಮತ್ತೊಂದು ಸೆಮಿಫೈನಲ್‌ನಲ್ಲಿ ಗುರುವಾರ ಸ್ಪೇನ್‌ ತಂಡವು ಫ್ರಾನ್ಸ್‌ ವಿರುದ್ಧ ಸೆಣಸಲಿದೆ. ಇಂದಿನ ಸೆಮಿಫೈನಲ್‌ ಪಂದ್ಯಗಳು (ಭಾರತೀಯ ಕಾಲಮಾನ) ಭಾರತ– ಜರ್ಮನಿ (ಮಧ್ಯಾಹ್ನ 3.30) ಸ್ಪೇನ್‌– ಫ್ರಾನ್ಸ್‌ (ಸಂಜೆ 6) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.