ಕರಾಟೆಯಲ್ಲಿ ಮಿಂಚುತ್ತಿರುವ ಮಧುಸೂದನ್‌ ಸಂತೇಮರಹಳ್ಳಿ: ಬಾಲ್ಯದಲ್ಲಿ ಹವ್ಯಾಸಕ್ಕಾಗಿ ಕಲಿತ ಕರಾಟೆ ಇಂದು ಆ ಹುಡುಗನಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಮಧುಸೂದನ್ ಜೋಗಿ, ಕರಾಟೆ ಜೂನಿಯರ್ ವಿಭಾಗದಲ್ಲಿ ಜಿಲ್ಲೆ, ರಾಜ್ಯ, ಅಂತರರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಸಾಧನೆ ತೋರಿ ಎಲ್ಲರಿಂದಲೂ ಶಹಬ್ಬಾಸ್‌ಗಿರಿ ಪಡೆಯುತ್ತಿದ್ದಾನೆ. ಚಾಮರಾಜನಗರದಲ್ಲಿ ಡ್ರ್ಯಾಗನ್ ಮಾರ್ಷಲ್ ಆರ್ಟ್ಸ್‌ ಅಕಾಡೆಮಿ ಇಂಡಿಯಾದಲ್ಲಿ ಎಂಟು ವರ್ಷಗಳ ಕಾಲ ತರಬೇತಿ ಪಡೆದಿರುವ ಜೋಗಿ, ಮೈಸೂರಿನ ಅಶೋಕ್ ಪುರಂನಲ್ಲಿರುವ ಶೋಟಾಕಾನ್ ಸ್ಕೂಲ್ ಆಪ್ ಕರಾಟೆ ಇಂಡಿಯಾ ವತಿಯಿಂದ ಜಿಲ್ಲೆ, ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕೆಲವು ರಾಷ್ಟಗಳ ಕರಾಟೆ ಪಟುಗಳೊಂದಿಗೆ ಸ್ಪರ್ಧೆಗಿಳಿದು ಪ್ರಥಮ ಸ್ಥಾನ ಪಡೆದಿದ್ದಾರೆ. ಮಧುಸೂದನ್ ಜೋಗಿ ಬಿಳಿಗಿರಿ ರಂಗನ ಬೆಟ್ಟದ ಸ್ನೇಕ್ ಸುಂದರ್ ಹಾಗೂ ಸರಸ್ವತಿ ದಂಪತಿಯ ಮಗ. ಚಾಮರಾಜನಗರದಲ್ಲಿ ಯೂನಿವರ್ಸ್ ಶಾಲೆಗೆ ಸೇರಿಸಿ ಕರಾಟೆ ತರಬೇತಿ ಕೊಡಿಸಿದರು. ಅಲ್ಲಿ ಪರಿಣಿತಿ ಪಡೆದು ಹಂತ ಹಂತವಾಗಿ ವೈಟ್, ಯೆಲ್ಲೋ, ಆರೆಂಜ್, ಗ್ರೀನ್ ಹಾಗೂ ಬ್ಲ್ಯಾಕ್ ಬೆಲ್ಟ್ ಸಂಪಾದಿಸಿದ್ದಾನೆ. ಮೈಸೂರಿನ ಚಾಮುಂಡಿ ಒಳಾಂಗಣ ಕ್ರೀಡಾಂಗಣದಲ್ಲಿ 2020ರಲ್ಲಿ 41ರಿಂದ 45ಕೆಜಿ ಒಳಗಿನ ಕರಾಟೆ ಸ್ಪರ್ಧಿಗಳಿಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಷಿಪ್‍ನ ರೆಡ್‍ಬೆಲ್ಟ್ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿದ್ದ. ಈ ಪಂದ್ಯಾವಳಿಯಲ್ಲಿ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಭೂತಾನ್, ಇರಾನ್ ಹಾಗೂ ಬಾಂಗ್ಲಾದೇಶದ ಕರಾಟೆ ಪಟುಗಳು ಭಾಗವಹಿಸಿದ್ದರು. ಕಳೆದ ವರ್ಷ ಬೆಂಗಳೂರಿನಲ್ಲಿ ರೆಕಿಯೋ ಶಿನ್ ಕಾಯ್ ಮಾರ್ಷಲ್ ಆರ್ಟ್ಸ್‌ ಟ್ರಸ್ಟ್ ವತಿಯಿಂದ 25ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದಿದ್ದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಷಿಪ್‍ನಲ್ಲಿ ಬ್ಲ್ಯಾಕ್ 2ನೇ ಬೆಲ್ಟ್‌ನಲ್ಲಿ ಮೊದಲ ಬಹುಮಾನ ಪಡೆದಿದ್ದಾನೆ. ಜತೆಗೆ ಜಿಲ್ಲಾ, ಹಾಗೂ ಅಂತರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳಿಗೆ ಮಧುಸೂದನ್‌ ಕೊರಳೊಡ್ಡಿದ್ದಾನೆ. ‘ಈ ತಿಂಗಳ ಕೊನೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಕರಾಟೆ ಚಾಂಪಿಯನ್‍ಷಿಪ್‍ಗೆ ಭಾಗವಹಿಸಲು ಸಜ್ಜಾಗುತ್ತಿದ್ದೇನೆ. ಅದರಲ್ಲಿ ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶ ಕರಾಟೆ ಪಟುಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಮಧುಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದನು. ‘ಈಗ ತರಬೇತುದಾರ ಮುರಳಿಯವರ ಜೊತೆಗೆ ಚಾಮರಾಜನಗರ ಸೇವಾ ಭಾರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯಲ್ಲಿ ಭಾಗವಹಿಸುತ್ತಿದ್ದೇನೆ. ಇತರೆ ಶಾಲೆಗಳಿಗೂ ಹೋಗಿ ತರಬೇತಿ ನೀಡಬೇಕು ಎಂಬ ಆಸೆ ಇದೆ. ಮುಂದಿನ ದಿನಗಳಲ್ಲಿ ಈ ಕೆಲಸ ಮಾಡುತ್ತೇನೆ’ ಎಂದು ಹೇಳುತ್ತಾನೆ ಮಧುಸೂದನ್‌. ‘ಹೆಮ್ಮೆಯ ವಿಚಾರ ಇನ್ನಷ್ಟು ಪ್ರೋತ್ಸಾಹ’ ‘ಜಿಲ್ಲೆಯಲ್ಲಿ ಅದರಲ್ಲೂ ನಮ್ಮ ಶಾಲೆಯ ವಿದ್ಯಾರ್ಥಿ ಅಂತರರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಮಧುಸೂದನ್‌ಗೆ ಇನ್ನಷ್ಟು ಹೆಚ್ಚು ಪ್ರೋತ್ಸಾಹ ನೀಡಲಾಗುವುದು’ ಎಂದು ಶಾಲೆಯ ಉಪ ಪ್ರಾಂಶುಪಾಲ ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ಮಾತನಾಡಿ ‘ಕರಾಟೆ ಅಲ್ಲದೆ ಕಬಡ್ಡಿ ಸೇರಿದಂತೆ ಅಥ್ಲೆಟಿಕ್ಸ್‌ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯನ್ನು ಪ್ರತಿನಿಧಿಸುತ್ತಿದ್ದಾನೆ. ಬಹುಮಾನಗಳನ್ನೂ ಗೆಲ್ಲುತ್ತಿದ್ದಾನೆ. ಅವನಿಗೆ ಪೂರ್ಣ ಸಹಕಾರ ನೀಡುತ್ತಿದ್ದೇವೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.