ಜೂನಿಯರ್ ವಿಶ್ವಕಪ್ ಹಾಕಿ: ಭಾರತಕ್ಕೆ ತಪ್ಪಿದ ಕಂಚು ಕ್ವಾಲಾಲಂಪುರ: ಎಫ್‌ಐಎಚ್‌ ಪುರುಷರ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಕಂಚಿನ ‍ಪದಕಕ್ಕಾಗಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ 1–3 ಗೋಲುಗಳಿಂದ ಸ್ಪೇನ್‌ಗೆ ಮಣಿಯಿತು. ನಿಕೋಲಸ್ ಅಲ್ವಾರೆಜ್ (25 ಮತ್ತು 51ನೇ ನಿಮಿಷ) ಮತ್ತು ಪೆಟ್ಚಾಮೆ ಪಾವ್ (40ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಸ್ಪೇನ್‌ ಕಂಚಿನ ಪದಕ ಜಯಿಸಿತು. ಭಾರತದ ಸುನಿಲ್ ಜೋಜೊ (28ನೇ ನಿಮಿಷ) ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಗುಂಪು ಹಂತದಲ್ಲಿ ಯುರೋಪಿಯನ್ ತಂಡದ ವಿರುದ್ಧ 1-4 ಗೋಲುಗಳಿಂದ ಸೋತಿದ್ದ ಭಾರತವು ಈ ಆವೃತ್ತಿಯ ಪಂದ್ಯಾವಳಿಯಲ್ಲಿ ಸ್ಪೇನ್ ವಿರುದ್ಧ ಎರಡನೇ ಸೋಲು ಅನುಭವಿಸಿದೆ. ಭುವನೇಶ್ವರದಲ್ಲಿ ನಡೆದ 2021 ರ ಪಂದ್ಯಾವಳಿಯ ಕೊನೆಯ ಆವೃತ್ತಿಯಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು. ಭಾರತದ ಗೋಲ್ ಕೀಪರ್ ಮೋಹಿತ್ ಶಶಿಕುಮಾರ್ ಅವರು ಕೆಲವು ಗೋಲುಗಳನ್ನು ತಡೆಯದಿದ್ದರೆ ದೊಡ್ಡ ಅಂತರದಿಂದ ಸೋಲುತ್ತಿತ್ತು.‌ ‌ಚುರುಕಾದ, ಕಿರುಪಾಸ್‌ಗಳ ಮೂಲಕ ಸ್ಪೇನ್, ಭಾರತದ ರಕ್ಷಣಾ ಕೋಟೆಯನ್ನು ಭೇದಿಸಲು ಯತ್ನಿಸಿತು. ಆದರೆ, ಮೋಹಿತ್ ಅವರು ಗೋಲು ಗಳಿಸಲು ಅವಕಾಶ ನೀಡಲಿಲ್ಲ. 25ನೇ ನಿಮಿಷದಲ್ಲಿ ಅಲ್ವಾರೆಜ್ ಪಂದ್ಯದ ಮೊದಲ ಗೋಲು ಗಳಿಸಿದರು. ಜೋಜೊ ಹೊರತು ಪಡಿಸಿದರೆ, ದೊರೆತ ಎಂಟು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಉತ್ತಮ ಸಿಂಗ್ ಬಳಗ ವಿಫಲವಾಯಿತು. ಫೈನಲ್‌ನಲ್ಲಿ ಫ್ರಾನ್ಸ್‌‌, ಜರ್ಮನಿಯನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.