: ಪುಣೇರಿ ಪಲ್ಟನ್‌ಗೆ ಸುಲಭ ಜಯ ಪುಣೆ: ರೈಡರ್ ಮೋಹಿತ್ ಗೋಯತ್ ಮತ್ತು ನಾಯಕ ಅಸ್ಲಂ ಮುಸ್ತಾಫಾ ಅವರ ಸರ್ವಾಂಗೀಣ ಆಟದ ಪ್ರದರ್ಶನದಿಂದ ಆತಿಥೇಯ ಪುಣೇರಿ ಪಲ್ಟನ್ ತಂಡ, ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಏಕಪಕ್ಷೀಯ ಪಂದ್ಯದಲ್ಲಿ ಶನಿವಾರ ಬೆಂಗಾಲ್ ವಾರಿಯರ್ಸ್ ತಂಡವನ್ನು 30 ಪಾಯಿಂಟ್‌ಗಳಿದ (49–19) ಸೋಲಿಸಿ ಜಯದ ಹಳಿಗೆ ಮರಳಿತು. ಇದು ಬೆಂಗಾಲ್ ವಾರಿಯರ್ಸ್‌ಗೆ ಮೊದಲ ಸೋಲು. ಬಾಲೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ರೈಡರ್‌ ಗೋಯತ್ 9 ರೈಡ್‌ ಪಾಯಿಂಟ್ ಮತ್ತು 3 ಟ್ಯಾಕಲ್‌ಗಳ ನೆರವಿನಿಂದ 12 ಪಾಯಿಂಟ್ಸ್ ಕಲೆಹಾಕಿದರು. ಅಸ್ಲಂ ಐದು ರೈಡ್‌ ಪಾಯಿಂಟ್ ಮತ್ತು ಐದು ಕ್ಯಾಚಿಂಗ್‌ಗಳೊಂದಿಗೆ ಮಿಂಚಿದರು. ಮೊಹಮ್ಮದ್‌ರೇಜಾ ಚಿಯೆನ್ನಾ ಮತ್ತು ಗೌರವ್ ಖಾತ್ರಿ ಅವರನ್ನೊಳಗೊಂಡ ರಕ್ಷಣಾ ವಿಭಾಗ ಬಲಿಷ್ಠವಾಗಿದ್ದು ಇಬ್ಬರೂ ಒಟ್ಟು 10 ಪಾಯಿಂಟ್‌ಗಳಿಗೆ ಕಾರಣರಾದರು. ಒಟ್ಟಾರೆ 24 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ್ದು, ಪಿಕೆಲ್‌ನಲ್ಲಿ ದಾಖಲೆ ಎನಿಸಿತು. ಪುಣೆ ತಂಡಕ್ಕೆ ನಾಲ್ಕು ಪಂದ್ಯಗಳಲ್ಲಿ ಇದು ಮೂರನೇ ಗೆಲುವಾಗಿದೆ. ವಾರಿಯರ್ಸ್ ಪರ ಪ್ರಮುಖ ರೈಡರ್‌ ಮಣಿಂದರ್ ಸಿಂಗ್ ಏಳು ಪಾಯಿಂಟ್ಸ್ ಗಳಿಸಿದರು. ಅಗ್ರಸ್ಥಾನದಲ್ಲಿರುವ ಬೆಂಗಾಲ್ ವಾರಿಯರ್ಸ್‌ಗೆ ಆಡಿದ ಐದು ಪಂದ್ಯಗಳಲ್ಲಿ ಮೂರು ಗೆದ್ದು, ಈ ಪಂದ್ಯ ಸೋತಿದೆ. ಒಂದು ಪಂದ್ಯ (ಜೈಪುರ ಪಿಂಕ್‌ ಪ್ಯಾಂಥರ್ಸ್ ವಿರುದ್ಧ) ಟೈ ಮಾಡಿಕೊಂಡಿದೆ. ದಬಾಂಗ್ ಡೆಲ್ಲಿಗೆ ಜಯ: ದಬಾಂಗ್ ಡೆಲ್ಲಿ ಕೆ.ಸಿ. ತಂಡ ಇನ್ನೊಂದು ಪಂದ್ಯದಲ್ಲಿ 51–40 ಪಾಯಿಂಟ್‌ಗಳಿಂದ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು. ವಿಜೇತರ ಪರ ರೈಡರ್‌ಗಳಾದ ಆಶು ಮಲಿಕ್ ಮತ್ತು ನಾಯಕ ನವೀನ್ ಕುಮಾರ್ ಕ್ರಮವಾಗಿ 16 ಮತ್ತು 14 ಪಾಯಿಂಟ್ಸ್ ಗಳಿಸಿದರು. ‌ ಟೈಟನ್ಸ್ ಪರ ನಾಯಕ ಪವನ್ ಶೆರಾವತ್ 14 ರೈಡಿಂಗ್ ಪಾಯಿಂಟ್ಸ್ ಕಲೆಹಾಕಿದರು. ಆದರೆ ಅವರಿಗೆ ಉತ್ತಮ ಬೆಂಬಲ ದೊರೆಯಲಿಲ್ಲ. ತೆಲುಗು ಟೈಟನ್ಸ್‌ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. ಭಾನುವಾರದ ಪಂದ್ಯಗಳು: ಪಟ್ನಾ ಪೈರೆಟ್ಸ್‌– ಜೈಪುರ ಪಿಂಕ್‌ಪ್ಯಾಂಥರ್ಸ್‌ (ರಾತ್ರಿ 8.00 ಗಂಟೆ), ಯು ಮುಂಬಾ– ತಮಿಳು ತಲೈವಾಸ್‌ (9.00) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.