ಬ್ಯಾಡ್ಮಿಂಟನ್: ಫೈನಲ್‌ಗೆ ಆಯುಷ್ ಶೆಟ್ಟಿ, ಸತೀಶ್ ಕಟಕ್‌: ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಆಯುಷ್ ಶೆಟ್ಟಿ ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಇಂಡೊನೇಷ್ಯಾದ ಅಲ್ವಿ ಫರ್ಹಾನ್ ಅವರನ್ನು ಸೋಲಿಸಿ ಒಡಿಶಾ ಮಾಸ್ಟರ್ಸ್‌ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ತಲುಪಿದರು. ಅವರು ಫೈನಲ್‌ನಲ್ಲಿ ಸ್ವದೇಶದ ಸತೀಶ್ ಕುಮಾರ್ ಕರುಣಾಕರನ್ ಅವರನ್ನು ಎದುರಿಸಲಿದ್ದಾರೆ. ಅಮೆರಿಕದ ಸ್ಪೊಕೇನ್‌ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಆಯುಷ್‌, ಫರ್ಹಾನ್ ಎದುರು ಸೋತಿದ್ದರು. ಕರ್ನಾಟಕದ 18 ವರ್ಷದ ಆಟಗಾರ, ಅಂದಿನ ಸೋಲಿಗೆ ಸೇಡು ತೀರಿಸಿಕೊಂಡರು. 73 ನಿಮಿಷಗಳ ಪಂದ್ಯದಲ್ಲಿ ಆಯುಷ್ ಹಿನ್ನಡೆಯಿಂದ ಚೇತರಿಸಿಕೊಂಡು 19–21, 21–14, 22–20ರಲ್ಲಿ ಅಲ್ವಿ ಅವರನ್ನು ಹಿಮ್ಮೆಟ್ಟಿಸಿದರು. ಮೊದಲ ಸಲ ಸೂಪರ್ 100 ಟೂರ್ನಿಯೊಂದರ ಫೈನಲ್ ತಲುಪಿದಂತಾಯಿತು. ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಸಾಣೂರಿನ ಆಟಗಾರ ಆಯುಷ್‌ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಜೂನಿಯರ್ ಟೂರ್ನಿಗಳಲ್ಲಿ ಆಡಿದ್ದ ಅವರು 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಜೂನಿಯರ್‌ ರ‍್ಯಾಂಕಿಂಗ್ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದರು. 22 ವರ್ಷದ ಸತೀಶ್ ಅವರಿಗೂ ಇದು ಸೂಪರ್ 100 ಮಟ್ಟದ ಟೂರ್ನಿಯ ಮೊದಲ ಫೈನಲ್. ಅವರು 21–14, 21–14ರಲ್ಲಿ ಸ್ವದೇಶದ ಆಟಗಾರ, ಹಾಲಿ ಚಾಂಪಿಯನ್ ಕಿರಣ್ ಜಾರ್ಜ್ ಅವರನ್ನು ಸೋಲಿಸಿದರು. ಈ ಸೆಮಿಫೈನಲ್ ಪಂದ್ಯ 41 ನಿಮಿಷ ನಡೆಯಿತು. ‌ಮಿಶ್ರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಭಾರತದ ತನಿಶಾ ಕ್ರಾಸ್ಟೊ– ಧ್ರುವ್ ಕಪಿಲ 21–14, 21–14ರಲ್ಲಿ ಮೂರನೇ ಶ್ರೇಯಾಂಕದ ಮಾಡ್ಸ್‌ ವೆಸ್ಟರ್‌ಗಾರ್ಡ್‌ –ಕ್ರಿಸ್ಟೀನ್ ಬುಷ್ (ಡೆನ್ಮಾರ್ಕ್‌) ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.