ಚೆಸ್‌: ಅಗ್ರಸ್ಥಾನದಲ್ಲಿ ಮುಂದುವರಿದ ಗುಕೇಶ್‌ ಚೆನ್ನೈ: ಭಾರತದ ಅರ್ಜುನ್ ಇರಿಗೇಶಿ ಅವರು ಇಲ್ಲಿ ನಡೆಯುತ್ತಿರುವ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಚಾಂಪಿಯನ್‌ಷಿಪ್‌ನ ಆರನೇ ಸುತ್ತಿನ ಪಂದ್ಯದಲ್ಲಿ ಇರಾನ್‌ ದೇಶದ ಅಗ್ರಶ್ರೇಯಾಂಕದ ಪರ್ಹಾಮ್‌ ಮಘಸೂದ್‌ ಅವರನ್ನು ಮಣಿಸಿ, ಜಂಟಿಯಾಗಿ ಎರಡನೇ ಸ್ಥಾನಕ್ಕೆ ಏರಿದರು. 20 ವರ್ಷದ ಅರ್ಜುನ್ ಬುಧವಾರ ಕಪ್ಪುಕಾಯಿಗಳಲ್ಲಿ ಆಡಿ 40 ನಡೆಗಳಲ್ಲಿ ಗೆಲುವು ಸಾಧಿಸಿದರು. 3.5 ಪಾಯಿಂಟ್ಸ್‌ ಗಳಿಸಿರುವ ಅರ್ಜುನ್ ಅವರು ಗ್ರ್ಯಾಂಡ್‌ಮಾಸ್ಟರ್‌ಗಳಾದ ಭಾರತದ ಪಿ. ಹರಿಕೃಷ್ಣ ಮತ್ತು ಉಕ್ರೇನ್‌ನ ಪಾವೆಲ್ ಎಲ್ಜಾನೋವ್ ಅವರೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ಗ್ರ್ಯಾಂಡ್‌ಮಾಸ್ಟರ್‌ ಡಿ. ಗುಕೇಶ್ ಅವರು ಸತತ ಎರಡನೇ ಗೆಲುವಿನ ಬಳಿಕ ಪಾವೆಲ್ ಎದುರು ಡ್ರಾ ಸಾಧಿಸಿದರು. ಬಿಳಿಕಾಯಿಗಳಲ್ಲಿ ಆಡಿದ ಸ್ಥಳೀಯ ಆಟಗಾರ 30 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ಆದಾಗಿಯೂ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇತರ ಪಂದ್ಯಗಳಲ್ಲಿ ಹರಿಕೃಷ್ಣ ಅವರು ಹಂಗೆರಿಯ ಸನನ್ ಸುಗಿರೋವ್ ಜತೆ ಡ್ರಾ ಮಾಡಿಕೊಂಡರೆ, ಅಮೆರಿಕದ ಲೆವೊನ್ ಅರೋನಿಯನ್ ಅವರು ಕೊನೆಯ ಸ್ಥಾನದಲ್ಲಿರುವ ಸರ್ಬಿಯಾದ ಅಲೆಕ್ಸಾಂಡರ್‌ ಪ್ರೆಡ್ಕೆ ಅವರೊಂದಿಗೆ ಡ್ರಾ ಸಾಧಿಸಿದರು. ಗುರುವಾರ ನಡೆಯುವ ಕೊನೆಯ ಸುತ್ತಿನಲ್ಲಿ ಹರಿಕೃಷ್ಣ– ಗುಕೇಶ್, ಅರ್ಜುನ್– ಸುಗಿರೋವ್, ಅಲೆಕ್ಸಾಂಡರ್‌– ಮಘಸೂದ್‌, ಎಲ್ಜಾನೋವ್– ಅರೋನಿಯನ್ ಮುಖಾಮುಖಿಯಾಗಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.