ಹಾಕಿ: ಭಾರತಕ್ಕೆ ಮಣಿದ ಫ್ರಾನ್ಸ್‌ ವಲೆನ್ಸಿಯಾ (ಸ್ಪೇನ್): ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಜುಗರಾಜ್ ಸಿಂಗ್ ಅವರ ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಇಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 5–4 ಗೋಲುಗಳಿಂದ ಮಣಿಸಿತು. ಐದು ರಾಷ್ಟ್ರಗಳ ಟೂರ್ನಿಯಲ್ಲಿ ಭಾರತಕ್ಕೆ ಇದು ಮೊದಲ ಗೆಲುವು. ಜುಗರಾಜ್ (20ನೇ ಮತ್ತು 60ನೇ ನಿಮಿಷ) ಗೋಲು ಗಳಿಸಿದರೆ, ಹರ್ಮನ್ ಪ್ರೀತ್ 25 ಮತ್ತು 56ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪಂದ್ಯದ ಮೊದಲಾರ್ಧದಲ್ಲಿ ವಿವೇಕ್ ಸಾಗರ್ ಪ್ರಸಾದ್ (16ನೇ ನಿಮಿಷ) ಒಂದು ಗೋಲು ಬಾರಿಸಿದರು. ಟೂರ್ನಿಯಲ್ಲಿ ಸತತ ಸೋಲು ಅನುಭವಿಸಿದ್ದ ಭಾರತ, ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿತು. ಸ್ಪೇನ್ ವಿರುದ್ಧ 0-1, ಬೆಲ್ಜಿಯಂ ವಿರುದ್ಧ 2-7 ಹಾಗೂ ಜರ್ಮನಿ ವಿರುದ್ಧ 2-3 ಅಂತರದಲ್ಲಿ ಸೋತಿತ್ತು. ಫ್ರಾನ್ಸ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲ ಕ್ವಾರ್ಟರ್‌ನ 11ನೇ ನಿಮಿಷದಲ್ಲಿ ಲೂಕಾಸ್ ಮಾಂಟೆಕಾಟ್ ಗಳಿಸಿದ ಪೆನಾಲ್ಟಿ ಕಾರ್ನರ್ ಗೋಲಿನಿಂದ ಫ್ರಾನ್ಸ್ ಮುನ್ನಡೆ ಸಾಧಿಸಿತು. ವಿವೇಕ್ ಗಳಿಸಿದ ಫೀಲ್ಡ್ ಗೋಲಿನಿಂದ ಭಾರತ ಎರಡನೇ ಕ್ವಾರ್ಟರ್‌ನ ಆರಂಭದಲ್ಲಿ ಸಮಬಲ ಸಾಧಿಸಿತು. ನಂತರ ಜುಗರಾಜ್‌ ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು, ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಮುನ್ನಡೆ ಹೆಚ್ಚಿಸಿದರು. ಫ್ರಾನ್ಸ್ ಪರ ಎಟಿಯೆನ್ ಟೈನೆವೆಜ್ (28ನೇ ನಿಮಿಷ) ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಗಾಸ್ಪರ್ಡ್ ಬೌಮ್ಗಾರ್ಟನ್ (43ನೇ ನಿಮಿಷ) ಗಳಿಸಿದ ಫೀಲ್ಡ್ ಗೋಲಿನಿಂದ ಫ್ರಾನ್ಸ್ ಸಮಬಲ ಸಾಧಿಸಿತು. ಸ್ಕೋರ್ ಸಮಬಲವಾಗುತ್ತಿದ್ದಂತೆ ಅಂತಿಮ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಪರಸ್ಪರರ ರಕ್ಷಣಾ ಕೋಟೆಯನ್ನು ದಾಟಿ ನುಗ್ಗಲು ಪ್ರಯತ್ನಿಸಿದವು. ಎಟಿಯೆನ್ ಟೈನೆವೆಜ್ (53ನೇ ನಿಮಿಷ) ಗಳಿಸಿದ ಮತ್ತೊಂದು ಪೆನಾಲ್ಟಿ ಕಾರ್ನರ್‌ನಲ್ಲಿ ಫ್ರಾನ್ಸ್ ಮುನ್ನಡೆ ಸಾಧಿಸಿತು. ಆದರೆ, ಹರ್ಮನ್ ಪ್ರೀತ್‌ ಪೆನಾಲ್ಟಿ ಕಾರ್ನರ್ ಅನ್ನು ಗೋಲಿನಲ್ಲಿ ಪರಿವರ್ತಿಸಿದರು. ಜುಗರಾಜ್ ಪಂದ್ಯದ ಕೊನೆಯ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಎರಡನೇ ಗೋಲು ಗಳಿಸಿ, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.