ಡಬ್ಲ್ಯುಎಫ್‌ಐ ನೂತನ ಸದಸ್ಯರ ಸಭೆ: ಅಡ್‌ಹಾಕ್ ಸಮಿತಿ ನಿರ್ಣಯಗಳು ರದ್ದು ನವದೆಹಲಿ: ಭೂಪೇಂದರ್ ಸಿಂಗ್ ಬಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯು ತೆಗೆದುಕೊಂಡಿದ್ದ ಎಲ್ಲಾ ನಿರ್ಧಾರಗಳನ್ನು ಗುರುವಾರ ಹೊಸದಾಗಿ ಚುನಾಯಿತಗೊಂಡ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್ಐ) ಸಮಿತಿಯು ರದ್ದುಗೊಳಿಸಿತು. ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಗೆದ್ದ ಕೆಲವೇ ಗಂಟೆಗಳ ನಂತರ, ನಗರದ ಹೋಟೆಲ್‌ನಲ್ಲಿ ಸಭೆ ಸೇರಿದ ನೂತನ ಅಧ್ಯಕ್ಷ ಸಂಜಯಕುಮಾರ್ ಸಿಂಗ್ ನೇತೃತ್ವದ ಸಮಿತಿಯು ಅಡ್‌ಹಾಕ್ ಸಮಿತಿಯ ನಿರ್ಧಾರಗಳನ್ನು ರದ್ದುಗೊಳಿಸಿತು. ಒಟ್ಟು 15 ಚುನಾಯಿತ ಸದಸ್ಯರಲ್ಲಿ 13 ಮಂದಿ ಈ ಸಭೆಯಲ್ಲಿದ್ದರು. ನೂತನ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ ಲೋಚಬ್ ಮತ್ತು ಹಿರಿಯ ಉಪಾಧ್ಯಕ್ಷ ದೇವೇಂದರ್ ಸಿಂಗ್ ಕಡಿಯಾನ್ ಸಭೆಯಲ್ಲಿ ಭಾಗವಹಿಸಲಿಲ್ಲ. ಇಬ್ಬರೂ ಅನಿತಾ ಶೆರಾನ್ ಬಣಕ್ಕೆ ಸೇರಿದವರು. ಈ ಬಣಕ್ಕೆ 15 ಸ್ಥಾನಗಳ ಪೈಕಿ ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ‘ಜೈಪುರದಲ್ಲಿ ಜನವರಿಯಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಸಲಾಗುವುದು ಎಂದು ತಾತ್ಕಾಲಿಕ ಸಮಿತಿ ಘೋಷಿಸಿತ್ತು. ಆದರೆ ಈ ನಿರ್ಧಾರವನ್ನು ರದ್ದುಗೊಳಿಸಲಾಗಿದೆ. ವಾಸ್ತವವಾಗಿ, ತಾತ್ಕಾಲಿಕ ಸಮಿತಿಯು ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ರದ್ದುಪಡಿಸಲಾಗಿದೆ’ ಎಂದು ಡಬ್ಲ್ಯುಎಫ್ಐ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. ‘ತಾತ್ಕಾಲಿಕ ಸಮಿತಿಯು ಘೋಷಿಸಿದ ಒಲಿಂಪಿಕ್ ಆಯ್ಕೆ ಟ್ರಯಲ್ಸ್ ಮಾನದಂಡಗಳು ಕೂಡ ರದ್ದಾಗಿವೆ. ಡಿಸೆಂಬರ್ 28 ರಿಂದ 30 ರವರೆಗೆ ಗೊಂಡಾದಲ್ಲಿ 15 ವರ್ಷದೊಳಗಿನ ಮತ್ತು ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್ ಆಯೋಜಿಸಲಾಗುವುದು’ ಎಂದು ಮೂಲಗಳು ಹೇಳಿವೆ. ಹೊಸದಾಗಿ ಆಯ್ಕೆಯಾದ ಫೆಡರೇಷನ್‌ನ ಮೊದಲ ಸಾಮಾನ್ಯ ಸಭೆ (ಜಿಬಿಎಂ) 2024 ರ ಜನವರಿ 11 ಅಥವಾ 12 ರಂದು ನವದೆಹಲಿಯಲ್ಲಿ ನಡೆಯಲಿದೆ. ಬಜ್ವಾ ನೇತೃತ್ವದ ತಾತ್ಕಾಲಿಕ ಸಮಿತಿ ಮೇ 4 ರಂದು ಅಸ್ತಿತ್ವಕ್ಕೆ ಬಂದಿತು. ಡಬ್ಲ್ಯುಎಫ್ಐ ವ್ಯವಹಾರಗಳ ಮೇಲ್ವಿಚಾರಣೆಗಾಗಿ ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ)ಗೆ ಸೂಚನೆ ನೀಡಿತ್ತು. ಜ.18: ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ನೀಡಿದ್ದಾರೆ ಎಂದು ಆರೋಪಿಸಿದ ಕುಸ್ತಿಪಟುಗಳು, ಅವರ ರಾಜೀನಾಮೆ ಮತ್ತು ಫೆಡರೇಷನ್‌ನ ವಿಸರ್ಜನೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಜ.19: ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್ ಕುಸ್ತಿಪಟು ಮತ್ತು ಬಿಜೆಪಿ ಸದಸ್ಯೆ ಬಬಿತಾ ಫೋಗಟ್ ಅವರಿಂದ ಕುಸ್ತಿಪಟುಗಳ ಭೇಟಿ, ಸರ್ಕಾರದೊಂದಿಗೆ ಮಾತುಕತೆಯ ಭರವಸೆ ಜ.20: ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ಕುಸ್ತಿಪಟುಗಳಿಂದ ದೂರು, ಲೈಂಗಿಕ ಕಿರುಕುಳ ಆರೋಪಗಳ ತನಿಖೆಗೆ ಸಮಿತಿ ರಚಿಸಲು ಒತ್ತಾಯ, ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಡಬ್ಲ್ಯುಎಫ್‌ಐಗೆ ಹೊಸ ಸಮಿತಿ ನೇಮಿಸಲು ಆಗ್ರಹ ಜ.21: ಕೇಂದ್ರ ಕೀಡಾ ಸಚಿವ ಅನುರಾಗ್ ಠಾಕೂರ್‌ ಅವರನ್ನು ಭೇಟಿಯಾದ ನಂತರ ಕುಸ್ತಿಪಟುಗಳಿಂದ ಪ್ರತಿಭಟನೆ ವಾಪಸ್‌ (ಡಬ್ಲ್ಯುಎಫ್‌ಐನ ಎಲ್ಲ ಚಟುವಟಿಕೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಕ್ರೀಡಾ ಸಚಿವಾಲಯ ಸೂಚನೆ, ಡಬ್ಲ್ಯುಎಫ್‌ಐನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅಮಾನತು) ಜ.23: ಆರೋಪಗಳ ಪರಿಶೀಲನೆಗಾಗಿ ಮೇರಿ ಕೋಮ್ ನೇತೃತ್ವದಲ್ಲಿ 5 ಸದಸ್ಯರ ಮೇಲುಸ್ತುವಾರಿ ಸಮಿತಿ ರಚನೆ ಜ.24: ಮೇಲುಸ್ತುವಾರಿ ಸಮಿತಿ ಸದಸ್ಯರ ಆಯ್ಕೆಯ ಬಗ್ಗೆ ಸರ್ಕಾರ ತಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಪ್ರತಿಭಟನೆನಿರತ ಕುಸ್ತಿಪಟುಗಳ ಬೇಸರ ಏ.16: ಮೇಲುಸ್ತುವಾರಿ ಸಮಿತಿಯಿಂದ ಕ್ರೀಡಾ ಸಚಿವಾಲಯಕ್ಕೆ ವರದಿ ಸಲ್ಲಿಕೆ, ಡಬ್ಲ್ಯುಎಫ್‌ಐಗೆ ಮೇ 7ರಂದು ಚುನಾವಣೆ ನಡೆಸಲು ದಿನಾಂಕ ನಿಗದಿ ಏ.23: ಅಪ್ರಾಪ್ತೆಯರು ಸೇರಿದಂತೆ 7 ಮಹಿಳಾ ಕುಸ್ತಿಪಟುಗಳಿಂದ ಬ್ರಿಜ್ ಭೂಷಣ್ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲು, ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ ಎಂದು ಆರೋಪಿಸಿ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಏ.24: ಮೇ 7ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಸ್ಥಗಿತಗೊಳಿಸಿದ ಕ್ರೀಡಾ ಸಚಿವಾಲಯ ಏ.25: ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ಕುಸ್ತಿಪಟುಗಳು, ದೆಹಲಿ ಪೊಲೀಸರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಏ.27: ಭಾರತ ಒಲಿಂಪಿಕ್‌ ಸಂಸ್ಥೆಯಿಂದ ಮೂರು ಸದಸ್ಯರ ಸಮಿತಿಯ ರಚನೆ (ಕುಸ್ತಿಪಟುಗಳು ಬೀದಿಗಿಳಿಯುವ ಬದಲು ಐಒಎಯನ್ನು ಸಂಪರ್ಕಿಸಬೇಕಿತ್ತು ಎಂದ ಭಾರತ ಒಲಿಂಪಿಕ್‌ ಸಂಸ್ಥೆ ಮುಖ್ಯಸ್ಥೆ ಪಿಟಿ ಉಷಾ) ಮೇ 3: ಕುಸ್ತಿಪಟುಗಳು ಮತ್ತು ದೆಹಲಿ ಪೊಲೀಸರ ನಡುವೆ ಮಾರಾಮಾರಿ, ಪ್ರತಿಭಟನಕಾರರ ತಲೆಗೆ ಗಾಯ, ಹಲವರ ಬಂಧನ ಮೇ 4: ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನನ್ವಯ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಹಾಗೂ 7 ದೂರುದಾರರಿಗೆ ಸೂಕ್ತ ಭದ್ರತೆ ಒದಗಿಸಿರುವುದರನ್ನು ಖಚಿತಪಡಿಸಿದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ಮುಕ್ತಾಯ ಮೇ 5: ಬ್ರಿಜ್ ಭೂಷಣ್ ವಿರುದ್ಧ ದೂರು ದಾಖಲಿಸಿದ ಕುಸ್ತಿಪಟುಗಳ ಹೇಳಿಕೆಗಳ ದಾಖಲಿಸಿದ ದೆಹಲಿ ಪೊಲೀಸರು ಮೇ 11: ಬ್ರಿಜ್‌ ಭೂಷಣ್‌ ಹೇಳಿಕೆಯನ್ನು ದಾಖಲಿಸಿದ ಪೊಲೀಸರು ಮೇ 28: ಹೊಸ ಸಂಸತ್ತಿನ ಉದ್ಘಾಟನೆಯ ವೇಳೆ ನುಗ್ಗಲು ಪ್ರತಿಭಟನಕಾರರಿಂದ ಯತ್ನ, ವಿನೇಶಾ ಪೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ, ಇತರ ಪ್ರತಿಭಟನಕಾರರ ಮೇಲೆ ಗಲಭೆ ಮತ್ತು ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲು ಜೂನ್ 7: ಬ್ರಿಜ್ ಭೂಷಣ್ ವಿರುದ್ಧದ ಪೊಲೀಸ್ ತನಿಖೆ ಮುಕ್ತಾಯಗೊಳಿಸುವುದು ಮತ್ತು ಜೂನ್ 30ರೊಳಗೆ ಬಾಕಿ ಡಬ್ಲ್ಯುಎಫ್‌ಐ ಉಳಿದಿರುವ ಚುನಾವಣೆಗಳನ್ನು ನಡೆಸಲಾಗುವುದು ಎಂದು ಅನುರಾಗ್‌ ಠಾಕೂರ್ ಭರವಸೆ ನೀಡಿದ ನಂತರ ಪ್ರತಿಭಟನೆ ಸ್ಥಗಿತ ಜೂನ್‌ 12: ಜಮ್ಮು ಕಾಶ್ಮೀರದ ಹೈಕೋರ್ಟ್‌ ಮಾಜಿ ಮುಖ್ಯ ನ್ಯಾಯಮೂರ್ತಿ ಮಹೇಶ್‌ ಮಿತ್ತಲ್‌ ಕುಮಾರ್ ಅವರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸಿದ ಭಾರತ ಒಲಿಂಪಿಕ್‌ ಸಂಸ್ಥೆ‌ ಜೂನ್‌ 23: ಡಬ್ಲ್ಯುಎಫ್‌ಐ ಚುನಾವಣೆ ಜುಲೈ 6ರಂದು ನಡೆಸಲು ನಿರ್ಧಾರ ಜೂನ್‌ 15: ದೆಹಲಿ ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಜೂನ್‌ 21: ಡಬ್ಲ್ಯುಎಫ್‌ಐ ಚುನಾವಣೆ ಜುಲೈ 11ರಂದು ನಡೆಸಲು ಮರುನಿಗದಿ, ಐದು ಅಂಗವಿಕಲ ರಾಜ್ಯ ಸಂಸ್ಥೆಗಳಿಂದ ಚುನಾವಣೆಗೆ ಮತದಾನದ ಹಕ್ಕುಗಳ ಕೋರಿಕೆ ಸಲ್ಲಿಕೆ ಜೂನ್ 22: ಏಷ್ಯನ್‌ ಗೇಮ್ಸ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ ಆಯ್ಕೆ ಟ್ರಯಲ್ಸ್ ಪ್ರಕ್ರಿಯೆಯಿಂದ ಆರು ಮಂದಿ ಕುಸ್ತಿಪಟುಗಳಿಗೆ ರಿಯಾಯಿತಿ ನೀಡಿದ ಭಾರತ ಒಲಿಂಪಿಕ್‌ ಸಂಸ್ಥೆಯ ಅಡ್‌ಹಾಕ್‌ ಸಮಿತಿ ಜೂನ್‌ 23: ಆರು ಕುಸ್ತಿಪಟುಗಳಿಗೆ ನೀಡಿರುವ ವಿನಾಯಿತಿ ಹಿಂಪಡೆಯಲು ಹಲವಾರು ತರಬೇತುದಾರರು, ಕುಸ್ತಿಪಟುಗಳ ಪೋಷಕರ ಒತ್ತಾಯ ಜೂನ್‌ 25: ಅಸ್ಸಾಂ ಕುಸ್ತಿ ಸಂಸ್ಥೆಯ ಅರ್ಜಿಯ ಹಿನ್ನೆಲೆಯಲ್ಲಿ ಜುಲೈ 11ರಂದು ನಿಗದಿಯಾಗಿದ್ದ ಡಬ್ಲ್ಯುಎಫ್‌ಐ ಚುನಾವಣೆಗೆ ಗುವಾಹಟಿ ಹೈಕೋರ್ಟ್ ತಡೆಯಾಜ್ಞೆ ಜುಲೈ 18: ಬ್ರಿಜ್ ಭೂಷಣ್ ಸಿಂಗ್‌ಗೆ ಮಧ್ಯಂತರ ಜಾಮೀನು ನೀಡಿದ ದೆಹಲಿ ಕೋರ್ಟ್‌ (ಏಷ್ಯನ್‌ ಗೇಮ್ಸ್‌ಗೆ ಬಜರಂಗ್‌ ಮತ್ತು ವಿನೇಶಾಗೆ ನೇರ ಪ್ರವೇಶ) ಜುಲೈ 19: ಬಜರಂಗ್ ಮತ್ತು ವಿನೇಶಾ ಅವರಿಗೆ ನೇರ ಪ್ರವೇಶ ನೀಡಿದ ಕ್ರಮ ವಿರೋಧಿಸಿ ಯುವ ಕುಸ್ತಿಪಟುಗಳ ಪ್ರತಿಭಟನೆ (ಡಬ್ಲ್ಯುಎಫ್‌ಐ ಚುನಾವಣೆ ಆಗಸ್ಟ್‌ 7ಕ್ಕೆ ಮರುನಿಗದಿ) ಜುಲೈ 20: ವಿನೇಶ್ ಮತ್ತು ಬಜರಂಗ್‌ಗೆ ನೀಡಲಾದ ವಿನಾಯಿತಿಯನ್ನು ಹಿಂಪಡೆಯಲು ಒತ್ತಾಯಿಸಿ ಐಒಎ ಪ್ರಧಾನ ಕಚೇರಿಗೆ ದೌಡಾಯಿಸಿದ ಜೂನಿಯರ್ ಕುಸ್ತಿಪಟುಗಳು ಮತ್ತು ಪೋಷಕರು (ಡಬ್ಲ್ಯುಎಫ್‌ಐ ಚುನಾವಣೆ ಆಗಸ್ಟ್‌ 12ಕ್ಕೆ ಮರುನಿಗದಿ) ಆಗಸ್ಟ್‌ 11: ಹರಿಯಾಣ ಕುಸ್ತಿ ಸಂಸ್ಥೆಯ ಅರ್ಜಿಯ ಹಿನ್ನೆಲೆಯಲ್ಲಿ ಆ.12ರಂದು ನಡೆಯಬೇಕಿದ್ದ ಚುನಾವಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆಯಾಜ್ಞೆ ಆ.23: ನಿಗದಿಪಡಿಸಿದ ಗಡುವಿನೊಂದಿಗೆ ಚುನಾವಣೆಗಳನ್ನು ನಡೆಸಲು ವಿಫಲವಾದ ಕಾರಣ ಡಬ್ಲ್ಯುಎಫ್ಐ ಅಮಾನತು ಮಾಡಿದ ಜಾಗತಿಕ ಕುಸ್ತಿ ಸಂಸ್ಥೆ ಡಿ.5: ಡಬ್ಲ್ಯುಎಫ್‌ಐ ಚುನಾವಣೆ ಡಿ.21ಕ್ಕೆ ಮರುನಿಗದಿ ಡಿ.21: ಬ್ರಿಜ್‌ ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ಡಬ್ಲ್ಯುಎಫ್‌ಐ ನೂತನ ಅಧ್ಯಕ್ಷರಾಗಿ ಆಯ್ಕೆ, ಅವರ ಬಣದ ಬಹುತೇಕ ಮಂದಿಗೆ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.