ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್: ರೆಯಾನ್ಶ್, ತನಿಷ್ಕಾಗೆ ಪ್ರಶಸ್ತಿ ಬೆಂಗಳೂರು: ರೆಯಾನ್ಶ್ ಜಲನ್ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಸಿಎಲ್‌ವಿ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬಾಲಕರ ವಿಭಾಗದ ಫೈನಲ್‌ ಪಂದ್ಯದಲ್ಲಿ ರೆಯಾನ್ಶ್ 11-5, 11-7, 5-11, 11-13, 11-7 ರಿಂದ ಅಮನ್ ಜಾರ್ಜ್ ಥಾಮಸ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ರೆಯಾನ್ಶ್‌ ಅವರು ಎಂ. ತಮೋಘ್ನ ವಿರುದ್ಧ; ಅಮನ್‌ ಅವರು ವೇದಾಂತ್ ವಶಿಷ್ಟ ವಿರುದ್ಧ ಜಯ ಗಳಿಸಿದ್ದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ತನಿಷ್ಕಾ 11-2, 11-2, 11-3 ರಿಂದ ಅನೆಟ್ಟೆ ಮರಿಯಾನಾ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ತನಿಷ್ಕಾ ಅವರು ದೀಕ್ಷಿತಾ ಪಿ. ನಾಯ್ಕ್ ವಿರುದ್ಧ; ಮರಿಯಾನಾ ಅವರು ರಾಶಿ ವಿ. ರಾವ್ ವಿರುದ್ಧ ಗೆಲುವು ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.