ರಾಷ್ಟ್ರೀಯ ಕ್ಲೈಂಬಿಂಗ್: ಭರತ್‌ಗೆ ಚಿನ್ನ ಬೆಂಗಳೂರು: ಕರ್ನಾಟಕದ ಭರತ್ ಪಿರೇರಾ ಇಲ್ಲಿ ಭಾನುವಾರ ಮುಕ್ತಾಯಗೊಂಡ 27ನೇ ರಾಷ್ಟ್ರೀಯ ಕ್ಲೈಂಬಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ಬೌಲ್ಡರ್ ವಿಭಾಗದಲ್ಲಿ ಚಿನ್ನ ಗೆದ್ದರು. ಸಬ್ ಜೂನಿಯರ್‌ ಬಾಲಕರ ಸ್ಪರ್ಧೆಯಲ್ಲಿ ಜೆ. ಧನುಷ್‌ ಬೆಳ್ಳಿ ಗೆದ್ದರೆ, ಅರ್ಶಿಯಾ ಬಾನು ಮಹಿಳಾ ವಿಭಾದಲ್ಲಿ ಬೆಳ್ಳಿ ಗೆದ್ದರು. ಅರುಶಿ ಭಾವೆ ಮತ್ತು ದಕ್ಷಿಣ್ ಮಾಥುರಿಯಾ ಜೂನಿಯರ್ ಬಾಲಕಿಯರ ಮತ್ತು ಜೂನಿಯರ್ ಬಾಲಕರ ಸ್ಪರ್ಧೆಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ಪೂರ್ವ ವಲಯವು ಒಟ್ಟು 14 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಪೂರ್ವ ವಲಯವು ಉತ್ತರ ವಲಯಕ್ಕಿಂತ ಒಂಬತ್ತು ಹೆಚ್ಚು ಪದಕಗಳನ್ನು ಗಳಿಸಿದೆ. ಪೂರ್ವ ವಲಯವು ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು, ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ ತಲಾ ಒಂದು ಚಿನ್ನ ಮತ್ತು ಬೆಳ್ಳಿ, ಜೂನಿಯರ್ ಬಾಲಕರ ವಿಭಾಗದಲ್ಲಿ ಒಂದು ಚಿನ್ನ ಮತ್ತು ಎರಡು ಬೆಳ್ಳಿ, ಜೂನಿಯರ್ ಬಾಲಕಿಯರ ವಿಭಾಗದಲ್ಲಿ ಎರಡು ಚಿನ್ನ ಮತ್ತು ಒಂದು ಕಂಚು, ಮಹಿಳಾ ವಿಭಾಗದಲ್ಲಿ ಒಂದು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿತು. ಪುರುಷರ ವಿಭಾಗದಲ್ಲಿ ಈಶಾನ್ಯ ವಲಯ ಎರಡು ಚಿನ್ನದೊಂದಿಗೆ ಮೂರನೇ ಸ್ಥಾನ ಪಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.