ಡಬ್ಲ್ಯುಎಫ್‌ಐ ಅಮಾನತು ಸ್ವಾಗತಾರ್ಹ: ಶರದ್ ಪವಾರ್‌ ಪುಣೆ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ)ನ ಆಡಳಿತ ಸಮಿತಿ ಅಮಾನತುಗೊಳಿಸಿರುವುದನ್ನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋಮವಾರ ಸ್ವಾಗತಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ‘ಡಬ್ಲ್ಯುಎಫ್ಐ ಆಡಳಿತ ಸಮಿತಿ ಅನ್ನು ಅಮಾನತುಗೊಳಿಸುವ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಬೇಕಾಗಿತ್ತು. ಮಹಿಳಾ ಕುಸ್ತಿಪಟುಗಳೊಂದಿಗೆ ಆಕ್ಷೇಪಾರ್ಹ ವರ್ತನೆ ಬಗ್ಗೆ ದೂರು ಬಂದಿತ್ತು. ಅಂತಹ ಶಕ್ತಿಗಳ ವಿರುದ್ಧ ಬಹಳ ಹಿಂದೆಯೇ ನಿರ್ಧಾರ ಕೈಗೊಳ್ಳಬೇಕಾಗಿತ್ತು’ ಎಂದು ಅವರು ಹೇಳಿದರು. 15 ಮತ್ತು 19 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ದಿನಾಂಕ ಘೋಷಣೆ ಮಾಡಿದ ಸಮಿತಿ ಕ್ರಮವು ನಿಯಮಬಾಹಿರವಾಗಿದೆ ಎಂದು ಸಚಿವಾಲಯ ಈ ಕ್ರಮ ಕೈಗೊಂಡಿದೆ. ಪ್ರಿಯಾಂಕಾ ವಾಗ್ದಾಳಿ: ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದರಿಗೆ ಆಶ್ರಯ ನೀಡಲು ಮತ್ತು ಗೊಂದಲವನ್ನು ಹರಡಲು ಡಬ್ಲ್ಯುಎಫ್ಐ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಆರೋಪಿಸಿದ್ದಾರೆ. ‌ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ಬೆಳಕಿಗೆ ಬಂದಾಗಲೆಲ್ಲಾ ಬಿಜೆಪಿ ಯಾವಾಗಲೂ ತನ್ನ ಎಲ್ಲಾ ಶಕ್ತಿಯಿಂದ ಆರೋಪಿಗಳನ್ನು ರಕ್ಷಿಸುತ್ತದೆ ಮತ್ತು ಸಂತ್ರಸ್ತರಿಗೆ ಚಿತ್ರಹಿಂಸೆ ನೀಡುತ್ತದೆ ಎಂದು ಟೀಕಿಸಿದ್ದಾರೆ. ‘ಡಬ್ಲ್ಯುಎಫ್‌ಐ ವಿಸರ್ಜಿಸುವ ಬಗ್ಗೆ ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಕುಸ್ತಿ ಫೆಡರೇಷನ್‌ ವಿಸರ್ಜನೆ ಮಾಡಿಲ್ಲ. ಅದರ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರ ಧ್ವನಿಯನ್ನು ಹತ್ತಿಕ್ಕಲು ಅವರು ಈ ಮಟ್ಟಕ್ಕೆ ಇಳಿಯಬೇಕೇ’ ಎಂದು ಪ್ರಿಯಾಂಕಾ ‘ಎಕ್ಸ್‌’ನಲ್ಲಿ ಪ್ರಶ್ನಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.