ನೂತನ ಅಧ್ಯಕ್ಷರ ನೇಮಕ: ಪಿಎಚ್‌ಎಫ್ ಅಮಾನತು ಸಾಧ್ಯತೆ ಕರಾಚಿ : ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಅವರು ಪಾಕಿಸ್ತಾನ ಹಾಕಿ ಫೆಡರೇಶನ್‌ (ಪಿಎಚ್‌ಎಫ್‌)ಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ ನಂತರ ಪಿಎಚ್‌ಎಫ್ ಅನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್‌ನಿಂದ ಅಮಾನತುಗೊಳಿಸುವ ಸಾಧ್ಯತೆಯಿದೆ. ಪಿಎಚ್ಎಫ್ ನೂತನ ಅಧ್ಯಕ್ಷ ಮಿರ್ ತಾರಿಕ್ ಹುಸೇನ್ ಬುಗ್ತಿ ಶನಿವಾರ ಲಾಹೋರ್‌ನಲ್ಲಿರುವ ಫೆಡರೇಶನ್ ಪ್ರಧಾನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಅವರ ಸುತ್ತಲೂ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಇದ್ದರು. ‘ತಮ್ಮನ್ನು ತೆಗೆದುಹಾಕಿರುವುದನ್ನು ಮತ್ತು ಮಿರ್ ತಾರಿಕ್ ಹುಸೇನ್ ಬುಗ್ತಿ ಅವರನ್ನು ಹೊಸ ಅಧ್ಯಕ್ಷರಾಗಿ ನೇಮಕ ಮಾಡಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು’ ಎಂದು 2015ರಿಂದ ಪಾಕಿಸ್ತಾನ ಹಾಕಿ ಫೆಡರೇಶನ್ ಅಧ್ಯಕ್ಷರಾಗಿರುವ ಖೋಖರ್ ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಸರ್ಕಾರದ ನಿರ್ಧಾರದ ವಿರುದ್ಧ ನಾನು ಮಂಗಳವಾರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುತ್ತೇನೆ. ಈ ಅಸಂವಿಧಾನಿಕ ಮತ್ತು ಕಾನೂನುಬಾಹಿರ ನಿರ್ಧಾರ ಬದಲಿಸುವವರೆಗೂ ಬಿಡುವುದಿಲ್ಲ’ ಎಂದು ಖೋಖರ್‌ ಹೇಳಿದರು. ‘ನಾನು ಕಾನೂನುಬದ್ಧ ಮತ್ತು ಚುನಾಯಿತ ಅಧ್ಯಕ್ಷನಾಗಿದ್ದೇನೆ. ನನ್ನ ಕೊನೆ ಉಸಿರಿರುವವರೆಗೂ ಈ ನಿರ್ಧಾರದ ವಿರುದ್ಧ ಹೋರಾಡುತ್ತೇನೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.