ಕುಸ್ತಿಪಟುಗಳ ಪ್ರತಿಭಟನೆಗೆ ಕಾಂಗ್ರೆಸ್‌ ಕುಮ್ಮಕ್ಕು: ಸಂಜಯ್‌ ಸಿಂಗ್ ಆರೋಪ ನವದೆಹಲಿ: ಹರಿಯಾಣದ ಜಾಜರ್‌ನಲ್ಲಿ ಬುಧವಾರ ಬಜರಂಗ್ ಅವರ ಅಖಾಡಾಕ್ಕೆ ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಭೇಟಿ ನೀಡಿದ್ದನ್ನು ಭಾರತ ಕುಸ್ತಿ ಫೆಡರೇಷನ್‌ನ ನೂತನ ಅಧ್ಯಕ್ಷ ಸಂಜಯಕುಮಾರ್ ಸಿಂಗ್ ಟೀಕಿಸಿದ್ದಾರೆ. ‘ಕುಸ್ತಿಪಟುಗಳು ಪ್ರತಿಭಟನೆಗೆ ಕಾಂಗ್ರೆಸ್ ಟೂಲ್‌ ಕಿಟ್‌ ಗ್ಯಾಂಗ್ ಮತ್ತು ಎಡಪಕ್ಷಗಳ ಕುಮ್ಮಕ್ಕು ಇರುವುದು ಈಗ ಸ್ಪಷ್ಟವಾಗಿದೆ. ಈ ಮೂವರು ಕುಸ್ತಿಪಟುಗಳು (ಬಜರಂಗ್ ಪೂನಿಯಾ ವಿನೇಶಾ ಫೋಗಾಟ್ ಮತ್ತು ಸಾಕ್ಷಿ ಮಲಿಕ್) ಅವರು ರಾಜಕೀಯ ಪಕ್ಷದ ಮಡಿಲಲ್ಲಿದ್ದುಕೊಂಡು ಆಟವಾಡುತ್ತಿದ್ದಾರೆ. ನಾಲ್ಕನೇ ಕುಸ್ತಿಪಟು ಯಾರಾದರೂ ಇದ್ದರೆ ದಯವಿಟ್ಟು ತೋರಿಸಿ. ಈ ಮೂವರಿಗೂ ಜೂನಿಯರ್ ಕುಸ್ತಿಪಟುಗಳ ಬೆಳೆಯಬಾರದು ಎಂಬ ದುರುದ್ದೇಶವಿದೆ. ಜೂನಿಯರ್ ಕುಸ್ತಿಪಟುಗಳ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಅವರದ್ದು’ ಎಂದಿದ್ದಾರೆ. ‘ಬಜರಂಗ್ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ನೇರವಾಗಿ ಅರ್ಹತೆ ಪಡೆದರು. ಟ್ರಯಲ್ಸ್‌ನಲ್ಲಿ ಭಾಗವಹಿಸಲಿಲ್ಲ. ಆದರೆ ಅಲ್ಲಿ ಅವರು 0–10ರಿಂದ ಸೋತರು. ಅವರು ಕುಸ್ತಿ ಕ್ರೀಡೆಯಲ್ಲಿ ಇಲ್ಲ. ರಾಜಕೀಯದಲ್ಲಿದ್ದಾರೆ. ನಿಮಗೆ ಕುಸ್ತಿ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಬನ್ನಿ ದಾರಿ ಮುಕ್ತವಾಗಿದೆ. ರಾಜಕೀಯ ಮಾಡುವುದೇ ಆದರೆ ಬಹಿರಂಗವಾಗಿ ಮಾಡಿ’ ಎಂದು ಸಂಜಯ್ ಸವಾಲು ಹಾಕಿದ್ದಾರೆ. ‘ಬಜರಂಗ್ ಪೂನಿಯಾ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ರಸ್ತೆಬದಿಯಲ್ಲಿ ಇಟ್ಟು ಹೋಗಿದ್ದನ್ನು ಸಂಜಯ್ ಟೀಕಿಸಿದರು. ‘ಇದು ಅವರ ವೈಯಕ್ತಿಕ ಸಂಗತಿ ಇರಬಹುದು. ಆದರೆ ಖೇಲ್ ರತ್ನದೊಂದಿಗೆ ದೇಶದ ಜನರ ಭಾವನೆಗಳು ಇರುತ್ತವೆ. ಅದು ಕೇವಲ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ಇಡೀ ಸಮಾಜದ್ದು. ಪದ್ಮಶ್ರೀ ಪ್ರಶಸ್ತಿಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದು ಸರಿಯಲ್ಲ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.