ಟಿಟಿ: ಆಕಾಶ್‌, ಸಹನಾಗೆ ಪ್ರಶಸ್ತಿ ಬೆಂಗಳೂರು: ಕೆ.ಜೆ. ಆಕಾಶ್‌ ಮತ್ತು ಸಹನಾ ಎಚ್‌. ಮೂರ್ತಿ ಅವರು ಸಿವಿಎಲ್‌ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಕ್ರಮವಾಗಿ 19 ವರ್ಷದೊಳಗಿನ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನ ಪ್ರಶಸ್ತಿಯನ್ನು ಗೆದ್ದುಕೊಂಡರು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ಫೈನಲ್‌ ಪಂದ್ಯದಲ್ಲಿ ಆಕಾಶ್‌ 11-6, 8-11, 18-16, 11-7, 11-3ರಿಂದ ರೋಹಿತ್‌ ಶಂಕರ್‌ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಆಕಾಶ್‌ ಅವರು ವರುಣ್‌ ಬಿ. ಕಶ್ಯಪ್‌ ವಿರುದ್ಧ, ರೋಹಿತ್‌ ಅವರು ಸಿದ್ಧಾಂತ್ ಧಾರಿವಾಲ್ ವಿರುದ್ಧ ಜಯ ಸಾಧಿಸಿದ್ದರು. ಮಹಿಳೆಯರ ಫೈನಲ್‌ನಲ್ಲಿ ಸಹನಾ 7-11, 11-9, 7-11, 11-9, 11-5, 6-11, 11-5ರಿಂದ ಹಿಮಾಂಶಿ ಚೌಧರಿ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಸಹನಾ ಅವರು ತೃಪ್ತಿ ಪುರೋಹಿತ್‌ ಅವರನ್ನು ಮತ್ತು ಹಿಮಾಂಶಿ ಅವರು ಪ್ರೇಕ್ಷಾ ಟಿ. ತಿಲಾವತ್ ಅವರನ್ನು ಮಣಿಸಿದ್ದರು. ತನಿಷ್ಕಾಗೆ ಮೂರನೇ ಪ್ರಶಸ್ತಿ: 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ತನಿಷ್ಕಾ ಕಪಿಲ್ ಕಾಲಭೈರವ್ 11-2, 11-4, 13-11 ರಿಂದ ಪ್ರಣವಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಇದು ಈ ಟೂರ್ನಿಯಲ್ಲಿ ತನಿಷ್ಕಾಗೆ ಮೂರನೇ ಪ್ರಶಸ್ತಿಯಾಗಿದೆ. 13 ಮತ್ತು 15 ವರ್ಷದೊಳಗಿನ ವಿಭಾಗಗಳ ಪ್ರಶಸ್ತಿಯನ್ನು ಅವರು ಗೆದ್ದುಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ತನಿಷ್ಕಾ ಅವರು ಪ್ರೇಕ್ಷಾ ಟಿ. ತಿಲಾವತ್ ವಿರುದ್ಧ, ಪ್ರಣವಿ ಅವರು ನೀತಿ ಅಗರ್‌ವಾಲ್‌ ವಿರುದ್ಧ ಗೆಲುವು ಸಾಧಿಸಿದ್ದರು. 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನ ಫೈನಲ್‌ನಲ್ಲಿ ವರುಣ್‌ ಬಿ. ಕಶ್ಯಪ್‌ 10-12, 11-4 , 11-8 , 6-11 ,11-8 ರಿಂದ ಅಭಿನವ್ ಕೆ. ಮೂರ್ತಿ ಅವರನ್ನು ಸೋಲಿಸಿ ಚಾಂಪಿಯನ್‌ ಆದರು. ಸೆಮಿಫೈನಲ್‌ನಲ್ಲಿ ವರುಣ್‌ ಅವರು ವಿಭಾಸ್‌ ವಿ.ಜಿ. ಅವರನ್ನು ಮತ್ತು ಅಭಿನವ್‌ ಅವರು ತೆಶುಬ್ ದಿನೇಶ್ ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.