ಬಜರಂಗ್ ಪೂನಿಯಾ ವಿವಾದ: ‍‍ಪ್ರತಿಕ್ರಿಯಿಸಲು ನಿರಾಕರಿಸಿದ ಕ್ರೀಡಾ ಸಚಿವ ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ಮರಳಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಶುಕ್ರವಾರ ನವದೆಹಲಿಯ ಕರ್ತವ್ಯ ಪಥಕ್ಕೆ ತೆರಳಿದ ಬಜರಂಗ್ ಪೂನಿಯಾ ಅವರನ್ನು ಪೊಲೀಸರು ತಡೆದು ವಾಪಸ್ ಕಳುಹಿಸಿದರು. ಆದರೆ, ಬಜರಂಗ್ ಅವರು ಪ್ರಧಾನಿಗೆ ಬರೆದ ಪತ್ರದ ಜತೆ ಪ್ರಶಸ್ತಿ ಪದಕವನ್ನು ಫುಟ್‌ಪಾತ್‌ನಲ್ಲಿ ಇಟ್ಟು ತೆರಳಿದ್ದರು. ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ)ಗೆ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಚುನಾಯಿತರಾಗಿರುವುದನ್ನು ವಿರೋಧಿಸಿ ಬಜರಂಗ್ ಈ ನಿರ್ಧಾರ ಕೈಗೊಂಡಿದ್ದಾರೆ. ‘ಈ ಕುರಿತು ನಾನು ಈಗಾಗಲೇ ಸಾಕಷ್ಟು ಮಾತನಾಡಿದ್ದೇನೆ. ಇನ್ನು ಮುಂದೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ‍ಸುದ್ದಿಗಾರರ ಪ್ರಶ್ನೆಗೆ ಅನುರಾಗ್ ಪ್ರತಿ‌ಕ್ರಿಯಿಸಿದರು. ಸಾಯ್ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಖ್ಯಾತ ಕ್ರೀಡಾಪಟುಗಳು ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಗೌರವಿಸುವ ಸಮಾರಂಭದಲ್ಲಿ ಸಚಿವರು ಪಾಲ್ಗೊಂಡಿದ್ದರು. ಹೊಸ ಹಾಸ್ಟೆಲ್ ಸೌಲಭ್ಯಗಳು ಮತ್ತು ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅನ್ನು ಉದ್ಘಾಟಿಸಿದರು. ‘ನಮ್ಮ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ (ಹಾಂಗೌಝೌ) ಮತ್ತು ಏಷ್ಯನ್ ಪ್ಯಾರಾ ಗೇಮ್ಸ್ ಎರಡರಲ್ಲೂ 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಈ ವಿಚಾರಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು. ಕ್ರೀಡಾಪಟುಗಳು (ಏಷ್ಯನ್ ಕ್ರೀಡಾಕೂಟಕ್ಕಾಗಿ) ನಿರ್ಗಮಿಸುವ ಮೊದಲು 100 ಪದಕಗಳ ಗಡಿ ದಾಟಲು ಸಾಧ್ಯವಾಗುತ್ತದೆಯೇ ಎಂದು ಅವರನ್ನು ಕೇಳಿದ್ದೆ. ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಸಾಧಿಸಿ ತೋರಿಸಿದರು’ ಎಂದರು. ‘ನಾವು ಹಲವಾರು ಪ್ರಮುಖ ಟೂರ್ನಿಗಳನ್ನು ಗೆದ್ದಿದ್ದೇವೆ. ಕಳೆದ ವರ್ಷ ಮೊದಲ ಥಾಮಸ್ ಕಪ್ ಗೆದ್ದಿದ್ದೇವೆ ಮತ್ತು ಹಾಕಿ, ಅಥ್ಲೆಟಿಕ್ಸ್ ಮತ್ತು ಇತರ ಸ್ಪರ್ಧೆಗಳಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದೇವೆ. ಉದಯೋನ್ಮುಖ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಛಾಪು ಮೂಡಿಸಲು ಮಾಜಿ ಚಾಂಪಿಯನ್‌ಗಳು ತಮ್ಮ ಜ್ಞಾನ ಮತ್ತು ಅನುಭವವನ್ನು ನೀಡಬೇಕು’ ಎಂದು ತಿಳಿಸಿದರು. ಕುಸ್ತಿ ಏಳ್ಗೆಗೆ ಲೋಚಬ್‌ ತಡೆ: ದರ್ಶನ್‌ ಲಾಲ್‌ ಟೀಕೆ ನವದೆಹಲಿ (ಪಿಟಿಐ): ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪ್ರೇಮಚಂದ್ ಲೋಚಬ್ ಅವರು ಆಯ್ಕೆಯಾಗಿರುವುದು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ನಿಯಮದ ಉಲ್ಲಂಘನೆಯಾಗಿದೆ. ಅವರು ಈಗ ಜೂನಿಯರ್ ನ್ಯಾಷನಲ್ಸ್ ಮುಂದೂಡುವಂತೆ ಒತ್ತಾಯಿಸುವ ಮೂಲಕ ದೇಶದಲ್ಲಿ ಕುಸ್ತಿಯ ಬೆಳವಣಿಗೆಗೆ ತಡೆಯುತ್ತಿದ್ದಾರೆ ಎಂದು ಚುನಾವಣೆಯಲ್ಲಿ ಅವರ ವಿರುದ್ಧ ಪರಾಭವಗೊಂಡ ದರ್ಶನ್ ಲಾಲ್ ಶನಿವಾರ ಟೀಕಿಸಿದ್ದಾರೆ. ಡಿಸೆಂಬರ್ 28 ರಿಂದ 30 ರವರೆಗೆ ಉತ್ತರಪ್ರದೇಶದ ಗೊಂಡಾದಲ್ಲಿ 15 ವರ್ಷದೊಳಗಿನ ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ನಡೆಯಲಿದೆ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಶುಕ್ರವಾರ ಘೋಷಿಸಿದ್ದರು. ಸ್ಪರ್ಧೆ ಮುಂದೂಡುವಂತೆ ಒತ್ತಾಯಿಸಿ ಲೋಚಬ್‌ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ‘ನಾವು ಕುಸ್ತಿ ಉಳಿಸಲು ಮತ್ತು ಉತ್ತೇಜಿಸಲು ಹೋರಾಡುತ್ತಿದ್ದೇವೆ ಎಂದು ಪ್ರತಿಭಟನಕಾರರು ಒಂದೆಡೆ ಹೇಳುತ್ತಾರೆ. ಮತ್ತೊಂದೆಡೆ ಸಂಜಯ್ ಸಿಂಗ್ ಅವರು ರಾಷ್ಟ್ರೀಯ ಕುಸ್ತಿ ಸ್ಪರ್ಧೆ ಆಯೋಜಿಸಲು ಸುತ್ತೋಲೆ ಹೊರಡಿಸಿದ ಕೂಡಲೇ, ಈ ಪ್ರತಿಭಟನಕಾರರು ಮತ್ತೆ ಪ್ರೇಮ್ ಚಂದ್ ಲೋಚಬ್ ಅವರ ಮೂಲಕ ಕುಸ್ತಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ’ ಎಂದು ಲಾಲ್ ದೂರಿದರು. ‘ಲೋಚಬ್ ಅವರಿಗೆ ಕುಸ್ತಿಯ ಬಗ್ಗೆ ತಿಳಿದಿಲ್ಲ. ಏಕೆಂದರೆ 2023ರ ಡಿಸೆಂಬರ್‌ ತಿಂಗಳು ಮುಗಿದರೆ ಬಹಳಷ್ಟು ಕುಸ್ತಿಪಟುಗಳು ವಯೋಮಿತಿ ಮೀರುತ್ತಾರೆ. ಅದರಿಂದಾಗಿ ಜೂನಿಯರ್ ಕುಸ್ತಿಪಟುಗಳು ಅವಕಾಶವಂಚಿತರಾಗುತ್ತಾರೆ’ ಎಂದು ಹೇಳಿದ್ದಾರೆ. ‘ಲೋಚಬ್ ಅವರು ಡಬ್ಲ್ಯುಎಫ್ಐನ ನಿಯಮಾವಳಿ 13 (ಬಿ) ವಿಧಿ ಉಲ್ಲಂಘಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಡಬ್ಲ್ಯುಎಫ್ಐನ ರಾಜ್ಯ ಘಟಕದ ಕಾರ್ಯಕಾರಿ ಸದಸ್ಯರಾಗಿರುವ ಸದಸ್ಯರು ಮಾತ್ರ ಚುನಾವಣೆಯಲ್ಲಿ ಭಾಗವಹಿಸಬಹುದು ಎಂದು ನಿಯಮ ಹೇಳುತ್ತದೆ. ಆದರೆ, ಲೋಚಬ್ ಯಾವುದೇ ರಾಜ್ಯ ಘಟಕದ ಕಾರ್ಯಕಾರಿ ಸದಸ್ಯರಲ್ಲ. ಅವರ ಹೆಸರನ್ನು ಗುಜರಾತ್ ಘಟಕದಿಂದ ಕಳುಹಿಸಲಾಗಿದೆ. ಆದರೆ ಅವರು ಎಂದಿಗೂ ಗುಜರಾತ್ ಕುಸ್ತಿ ಸಂಘದ ಸದಸ್ಯರಾಗಿರಲಿಲ್ಲ. ಸ್ವತಃ ಗುಜರಾತ್ ಅಧ್ಯಕ್ಷರೇ ಇದನ್ನು ದೃಢಪಡಿಸಿದ್ದಾರೆ ಮತ್ತು ರಾಜ್ಯದಿಂದ ಅವರ ಹೆಸರನ್ನು ಕಳುಹಿಸುವಂತೆ ಅವರ ಮೇಲೆ ಬಹಳಷ್ಟು ಒತ್ತಡವಿತ್ತು’ ಎಂದು ಹೇಳಿದ್ದಾರೆ. ಪ್ರತಿಭಟನನಿರತ ಕುಸ್ತಿಪಟುಗಳ ವಿರುದ್ಧ ಆಕ್ರೋಶ ನವದೆಹಲಿ (ಪಿಟಿಐ): ‘ಪ್ರತಿಭಟನನಿರತ ಕುಸ್ತಿಪಟುಗಳು ರಾಜಕೀಯದಲ್ಲಿ ತೊಡಗಿದ್ದಾರೆ’ ಎಂದು ವಾಗ್ದಾಳಿ ನಡೆಸಿರುವ ಭಾರತ ಕುಸ್ತಿ ಫೆಡರೇಷನ್ ನೂತನ ಅಧ್ಯಕ್ಷ ಸಂಜಯ್‌ ಸಿಂಗ್, ‘ತಾವು ಬ್ರಿಜ್‌ ಭೂಷಣ್‌ ಶರಣ್ ಸಿಂಗ್ ಅವರ ಅಭ್ಯರ್ಥಿಯಲ್ಲ’ ಎಂದು ಪ್ರತಿಪಾದಿಸಿದ್ದಾರೆ. ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ್ ಸಿಂಗ್ ಅವರು ಬ್ರಿಜ್‌ ಭೂಷಣ್ ಸಿಂಗ್ ಆಪ್ತರು ಎಂದು ಕುಸ್ತಿಪಟುಗಳಾದ ವಿನೇಶ್ ಪೊಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಆರೋಪಿಸಿದ್ದರು. ‘ಕ್ರೀಡಾಪಟುಗಳು ಈಗಾಗಲೇ ತಯಾರಿ ಪ್ರಾರಂಭಿಸಿದ್ದಾರೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಬಯಸುವವರು ಅದನ್ನು ಮಾಡಬಹುದು. ಇದು ಅವರ ವೈಯಕ್ತಿಕ ವಿಷಯ, ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದರು. ‘ನಾನು 12 ವರ್ಷಗಳಿಂದ ಫೆಡರೇಶನ್‌ನಲ್ಲಿ ಇದ್ದೇನೆ. ಸಂಸದ ಬ್ರಿಜ್ ಭೂಷಣ್ ಅವರಿಗೆ ಹತ್ತಿರವಾಗಿದ್ದೇನೆ ಎಂದ ಮಾತ್ರಕ್ಕೆ ನಾನು ಡಮ್ಮಿ ಅಭ್ಯರ್ಥಿ ಎಂದರ್ಥವಲ್ಲ. ಅವರಿಗೆ ಹತ್ತಿರವಾಗಿದ್ದರೆ ಅದು ಅಪರಾಧವೇ?’ ಎಂದು ಪ್ರಶ್ನಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.