ಎಫ್‌ಐಎಚ್ 5 ಎ ಸೈಡ್ ಹಾಕಿ ವಿಶ್ವಕಪ್ ಟೂರ್ನಿ: ಸಿಮ್ರನ್‌ಜೀತ್, ರಜನಿಗೆ ನಾಯಕತ್ವ ನವದೆಹಲಿ: ಸಿಮ್ರನ್‌ಜೀತ್ ಸಿಂಗ್ ಮತ್ತು ರಜನಿ ಇತಿಮರ್ಪು ಅವರನ್ನು ಕ್ರಮವಾಗಿ ಎಫ್‌ಐಎಚ್ 5 ಎ ಸೈಡ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ಪುರುಷ ಮತ್ತು ಮಹಿಳಾ ತಂಡಗಳಿಗೆ ನಾಯಕರನ್ನಾಗಿ ಮಾಡಲಾಗಿದೆ. ಮಸ್ಕತ್‌ನಲ್ಲಿ ಜನವರಿ 24 ರಿಂದ 27ರವರೆಗೆ ಮಹಿಳೆಯರ ಟೂರ್ನಿ ಮತ್ತು 28ರಿಂದ 31ರವರೆಗೆ ಪುರುಷರ ಟೂರ್ನಿ ಆಯೋಜಿಸಲಾಗಿದೆ. ಗೋಲ್‌ಕೀಪರ್ ರಜನಿ ನಾಯಕತ್ವದ ತಂಡದಲ್ಲಿ ಡಿಫೆಂಡರ್ ಮಹಿಮಾ ಚೌಧರಿ ಉಪನಾಯಕಿಯಾಗಿದ್ದಾರೆ. ಎರಡನೇ ಗೋಲ್‌ಕೀಪರ್ ಆಗಿ ಬಾನ್ಸುರಿ ಸೋಳಂಕಿ, ಡಿಫೆಂಡರ್ಸ್‌ ಅಕ್ಷತಾ ಅಬಾರೊ ಧೆಕಳೆ ಮತ್ತು ಜ್ಯೋತಿ ಚೇಟ್ರಿ , ಮಿಡ್‌ಫೀಲ್ಡರ್‌ ಮರಿಯಾನಾ ಕುಜುರ್, ಮುಮ್ತಾಜ್ ಖಾನ್, ಫಾರ್ವರ್ಡ್ಸ್‌ ಅಜಮಿನಾ ಕುಜುರ್, ಋತುಜಾ ದಾದಸೊ ಪಿಸಾಳ ಮತ್ತು ದೀಪಿಕಾ ಅವರು ತಂಡದಲ್ಲಿದ್ಧಾರೆ. ಮಹಿಳಾ ತಂಡವು ಸಿ ಗುಂಪಿನಲ್ಲಿ ಆಡಲಿದೆ. ನಮಿಬಿಯಾ, ಪೋಲೆಂಡ್ ಮತ್ತು ಅಮೆರಿಕ ತಂಡಗಳು ಈ ಗುಂಪಿನಲ್ಲಿವೆ. ಪುರುಷರ ತಂಡಕ್ಕೆ ಮನದೀಪ್ ಮೋರ್ ಉಪನಾಯಕನಾಗಿದ್ದಾರೆ. ಗೋಲ್‌ಕೀಪರ್‌ಗಳಾದ ಸೂರಜ್ ಕರ್ಕೆರಾ, ಪ್ರಶಂತ್ ಕುಮಾರ್ ಚೌಹಾಣ್, ಮಿಡ್‌ಫೀಲ್ಡರ್‌ ಮೊಹಮ್ಮದ್ ರಾಹಿಲ್ ಮೌಸಿನ್, ಮಣಿಂದರ್ ಸಿಂಗ್, ಫಾರ್ವರ್ಡ್‌ನಲ್ಲಿ ಪವನ್ ರಾಜಭರ್, ಗುರ್ಜ್ಯೋತ್ ಸಿಂಗ್ ಮತ್ತು ಉತ್ತಮ್ ಸಿಂಗ್ ಇದ್ದಾರೆ. ಪುರುಷರ ತಂಡವು ಬಿ ಗುಂಪಿನಲ್ಲಿ ಆಡಲಿದೆ. ಈಜಿಪ್ತ್, ಜಮೈಕಾ ಮತ್ತು ಸ್ವಿಟ್ಜರ್‌ಲೆಂಡ್ ತಂಡಗಳನ್ನು ಎದುರಿಸಲಿದೆ. ಎ ಗುಂಪಿನಲ್ಲಿ ನೆದರ್ಲೆಂಡ್ಸ್, ನೈಜಿರಿಯಾ, ಪಾಕಿಸ್ತಾನ ಮತ್ತು ಪೋಲೆಂಡ್, ಸಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಕೆನ್ಯಾ, ನ್ಯೂಜಿಲೆಂಡ್, ಟ್ರಿನಿಡಾಡ್ ಮತ್ತು ಟೊಬ್ಯಾಗೊ, ಡಿ ಗುಂಪಿನಲ್ಲಿ ಫಿಜಿ, ಮಲೇಷ್ಯಾ, ಒಮನ್ ಮತ್ತು ಅಮೆರಿಕ ತಂಡಗಳು ಇವೆ. ‘ನಮ್ಮ ತಂಡಗಳು ಉತ್ತಮವಾಗಿವೆ. ಎಲ್ಲ ವಿಭಾಗಗಳಲ್ಲಿ ಸಮತೋಲನ ಕಾಯ್ದುಕೊಂಡಿವೆ. ಈ ಮಾದರಿಯು ರೋಚಕವಾಗಿದ್ದು ಅದಕ್ಕೆ ತಕ್ಕಂತೆ ತಂಡಗಳನ್ನು ಸಿದ್ಧಗೊಳಿಸಲಾಗಿದೆ’ ಎಂದು ಕೋಚ್ ಸರ್ದಾರ್ ಸಿಂಗ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.