ವುಶು ಕ್ರೀಡಾಕೂಟ: ಬಾಗಲಕೋಟೆಗೆ ಸಮಗ್ರ ಪ್ರಶಸ್ತಿ ಬೀದರ್‌: ಕರ್ನಾಟಕ ರಾಜ್ಯ ವುಶು ಸಂಸ್ಥೆಯಿಂದ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ 22ನೇ ವುಶು ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲೆ ಒಟ್ಟು 125 ಅಂಕಗಳನ್ನು ಗಳಿಸಿ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ವುಶು ಕ್ರೀಡಾಕೂಟದ ಸ್ಯಾಂಶೋ ಮತ್ತು ತೌಲೂ ಎರಡೂ ವಿಭಾಗಗಳಲ್ಲಿ ಬಾಗಲಕೋಟೆ ಜಿಲ್ಲೆಯ ಆಟಗಾರರು ಉತ್ತಮ ಸಾಧನೆ ತೋರಿ ಪ್ರಶಸ್ತಿ ಬಾಚಿಕೊಂಡರು. ಸ್ಯಾಂಶೋದಲ್ಲಿ 70 ಅಂಕ, ತೌಲೂದಲ್ಲಿ 55 ಅಂಕ ಗಳಿಸಿದರು. ಇದನ್ನು ಆಧರಿಸಿ ಸಮಗ್ರ ಪ್ರಶಸ್ತಿಗೆ ಬಾಗಲಕೋಟೆಯನ್ನು ಆಯ್ಕೆ ಮಾಡಲಾಯಿತು ಎಂದು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ ‘ಪ್ರಜಾವಾಣಿ’ಗೆ ತಿಳಿಸಿದರು. ಸ್ಯಾಂಶೋ ವಿಭಾಗದಲ್ಲಿ ಮೈಸೂರು ಮತ್ತು ಬೆಳಗಾವಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಎರಡು ಜಿಲ್ಲೆಗಳು ಕ್ರಮವಾಗಿ 63, 54 ಅಂಕ ಗಳಿಸಿದವು. ಇನ್ನು, ತೌಲೂ ವಿಭಾಗದಲ್ಲಿ ಬೆಂಗಳೂರು 38 ಅಂಕ ಗಳಿಸಿ ದ್ವಿತೀಯ, ಬೀದರ್‌ 31 ಅಂಕ ಪಡೆದು ತೃತೀಯ ಸ್ಥಾನ ಗಳಿಸಿತು. ರಾಜ್ಯದ ವಿವಿಧ ಜಿಲ್ಲೆಗಳ 650 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.