ಡಬ್ಲ್ಯುಎಫ್‌ಐ ಕಾರ್ಯಕ್ರಮಗಳಿಗೆ ಮಾನ್ಯತೆಯಿಲ್ಲ: ಕ್ರೀಡಾ ಸಚಿವಾಲಯ ನವದೆಹಲಿ: ಅಮಾನತುಗೊಂಡಿರುವ ಭಾರತ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜಿಸಲು ಯಾವುದೇ ಅಧಿಕಾರ ಹೊಂದಿಲ್ಲ. ಫೆಡರೇಷನ್‌ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ತಿಳಿಸಿದೆ. ರಾಷ್ಟ್ರೀಯ ಕ್ರೀಡಾ ಸಂಹಿತೆ ಮತ್ತು ಡಬ್ಲ್ಯುಎಫ್‌ಐ ನಿಯಮ ಉಲ್ಲಂಘನೆಯನ್ನು ಉಲ್ಲೇಖಿಸಿ ಕ್ರೀಡಾ ಸಚಿವಾಲಯವು ಡಿ.24 ರಂದು ಕುಸ್ತಿ ಫೆಡರೇಷನ್‌ನ ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿತ್ತು. ನಂತರದಲ್ಲಿ ಅಮಾನತುಗೊಂಡಿರುವ ಆಡಳಿತ ಮಂಡಳಿ ಅಧ್ಯಕ್ಷ ಸಂಜಯ್ ಸಿಂಗ್ ಅವರು, ‘ಶೀಘ್ರದಲ್ಲೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆಯೋಜಿಸುವುದಾಗಿ ಘೋಷಿಸಿದ್ದರು. ಮಾತ್ರವಲ್ಲ, ಅಮಾನತಿಗೆ ಮಾನ್ಯತೆ ಇಲ್ಲ’ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಸಂಜಯ್‌ ಸಿಂಗ್‌ಗೆ ಪತ್ರ ಬರೆದಿರುವ ಕ್ರೀಡಾ ಸಚಿವಾಲಯ ‘ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜನೆ ಸಂಬಂಧ ಕುಸ್ತಿ ಫೆಡರೇಷನ್‌ನ ಲೆಟರ್‌ಹೆಡ್‌ ಬಳಸಲು ನಿಮಗೆ ಯಾವುದೇ ಅಧಿಕಾರ ಇರುವುದಿಲ್ಲ. ಡಬ್ಲ್ಯುಎಫ್‌ಐನ ಲೆಟರ್‌ಹೆಡ್ ಮತ್ತು ಕ್ರೀಡಾ ಸಚಿವಾಲಯದ ಹೆಸರು, ಲಾಂಛನ ಬಳಸುವುದನ್ನು ತಕ್ಷಣ ನಿಲ್ಲಿಸಬೇಕು’ ಎಂದು ಸೂಚಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.