ಡಬ್ಲ್ಯುಎಫ್ಐ ಮೇಲೆ ಐಒಎ ನಿಯಂತ್ರಣ ಸಾಧ್ಯವಿಲ್ಲ: ಸಿಂಗ್‌ ನವದೆಹಲಿ: ಅಂತರರಾಷ್ಟ್ರೀಯ ಕುಸ್ತಿ ಸಂಸ್ಥೆ ನಿಯಮಗಳು ಹಾಗೂ ಐಒಸಿ ಸನದು ಪ್ರಕಾರ, ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಹೊಸದಾಗಿ ಆಯ್ಕೆಯಾದ ಭಾರತ ಕುಸ್ತಿ ಫೆಡರೇಷನ್ ಆಡಳಿತ ಮಂಡಳಿ ಮೇಲೆ ಯಾವುದೇ ನಿಯಂತ್ರಣ ಹೇರುವಂತಿಲ್ಲ ಎಂದು ಅಮಾನತುಗೊಂಡಿರುವ ಮಂಡಳಿಯ ಅಧ್ಯಕ್ಷ ಸಂಜಯ್‌ ಸಿಂಗ್ ಹೇಳಿದ್ದಾರೆ. ಫೆಡರೇಷನ್ (ಡಬ್ಲ್ಯುಎಫ್‌ಐ) ಮೇಲಿನ ಅಮಾನತು ಆದೇಶವನ್ನು ತೆಗೆದುಹಾಕುವಂತೆಯೂ ವಿಶ್ವ ಕುಸ್ತಿ ಸಂಸ್ಥೆಗೆ (ಯುಡಬ್ಲ್ಯುಡಬ್ಲ್ಯು) ಮನವಿ ಮಾಡಿದ್ದಾರೆ. ಡಬ್ಲ್ಯುಎಫ್‌ಐನ ದೈನಂದಿನ ಚಟುವಟಿಕೆಯನ್ನು ಅಡ್‌ಹಾಕ್‌ ಸಮಿತಿ ನಿರ್ವಹಿಸುತ್ತಿದೆ. ಕುಸ್ತಿಯಲ್ಲಿ ಐಒಎಯ ಯಾವುದೇ ಪ್ರಭಾವವನ್ನು ಕಾನೂನುಬಾಹಿರ ಎಂದು ಪರಿಗಣಿಸಬೇಕು. ಕಳೆದ ವರ್ಷ ಡಬ್ಲ್ಯುಎಫ್‌ಐ ಮೇಲೆ ವಿಧಿಸಿದ ತಾತ್ಕಾಲಿಕ ಅಮಾನತು ತೆಗೆದುಹಾಕಬೇಕು ಎಂದು ಯುಡಬ್ಲ್ಯುಡಬ್ಲ್ಯು ಅಧ್ಯಕ್ಷ ನೆನಾಡ್ ಲಾಲೋವಿಕ್ ಅವರಿಗೆ ಬರೆದ ಪತ್ರದಲ್ಲಿ ಸಿಂಗ್ ಹೇಳಿದ್ದಾರೆ. ‘ಯುಡಬ್ಲ್ಯುಡಬ್ಲ್ಯುನ ಅಂಗಸಂಸ್ಥೆ ಸದಸ್ಯರಾಗಿ ಮುಂದುವರಿಯುತ್ತೇವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದಾಗ್ಯೂ, 2023 ಆಗಸ್ಟ್ 23ರ ವಿಶ್ವ ಕುಸ್ತಿ ಸಂಸ್ಥೆ ಪತ್ರದಲ್ಲಿ ಉಲ್ಲೇಖಿಸಿದಂತೆ ಡಬ್ಲ್ಯುಎಫ್ಐ ಚುನಾವಣೆ ನಡೆಸಿದ ನಂತರ ಅಮಾನತು ತೆಗೆದು ಹಾಕಬೇಕಿತ್ತು. ರಾಷ್ಟ್ರೀಯ ಕ್ರೀಡಾ ಫೆಡರೇಶನ್ (ಎನ್‌ಎಸ್‌ಎಫ್) ಮೇಲೆ ಐಒಎ ಯಾವುದೇ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು 2023 ರ ಆಗಸ್ಟ್ 6 ರಂದು ಐಒಎ ವಿರುದ್ಧ ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆಯೂ ಗಮನ ಸೆಳೆಯಲು ಬಯಸುತ್ತೇವೆ’ ಎಂದು ವಿವರಿಸಿದ್ದಾರೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆದಿದೆ. ಪ್ರತಿ ಹಂತದಲ್ಲೂ ಐಒಎಗೆ ಮಾಹಿತಿ ನೀಡಲಾಗಿದೆ. ಚುನಾವಣೆ ಮುಗಿದ ಮೂರು ದಿನಗಳ ಬಳಿಕ ಕ್ರೀಡಾ ಸಚಿವಾಲಯವು, ಸಂಜಯ್ ಕುಮಾರ್ ಸಿಂಗ್ ಅಧ್ಯಕ್ಷರಾಗಿ ಮತ್ತು ಪ್ರೇಮ್ ಚಂದ್ ಲೋಚಬ್ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಇತರ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ ಎಂದು ಪತ್ರ ನೀಡಿದೆ. ಈ ಪತ್ರದ ಪ್ರತಿಯನ್ನು ಸಹ ಪರಿಶೀಲನೆಗಾಗಿ ಲಗತ್ತಿಸಲಾಗಿದೆ’ ಎಂದು ಸಿಂಗ್ ಬರೆದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.