ಜಗ್ರೆಬ್ ಓಪನ್ ಕುಸ್ತಿಗೆ ಭಾರತದ 13 ‍ಪೈಲ್ವಾನರು ನವದೆಹಲಿ; ಕ್ರೊವೇಷ್ಯಾದಲ್ಲಿ ನಡೆಯಲಿರುವ ಜಗ್ರೆಬ್‌ ಓಪನ್‌ ಕುಸ್ತಿಗೆ ಭಾರತದ 13 ಪೈಲ್ವಾನರ ತಂಡವನ್ನು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಡ್‌ಹಾಕ್ ಸಮಿತಿ ಮಂಗಳವಾರ ಪ್ರಕಟಿಸಿದೆ. ವೀಸಾಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ತಂಡವನ್ನು ಘೋಷಿಸಲಾಗಿದೆ. ಕ್ರೊವೇಷ್ಯಾ ರಾಜಧಾನಿಯಲ್ಲಿ ಮೊದಲ ವಿಶ್ವ ರ್‍ಯಾಂಕಿಂಗ್ ಟೂರ್ನಿಯು ಜನವರಿಗೆ 10 ರಿಂದ 14ರ ವರೆಗೆ ನಡೆಯಲಿದೆ. ‘ವೀಸಾ ಪಡೆಯಲು ಇದ್ದ ಅಡೆತಡೆಯನ್ನು ವಿದೇಶಾಂಗ ಸಚಿವಾಲಯವು ಬಗೆಹರಿಸಿದೆ. ಸಚಿವಾಲಯದ ಸಮಯೋಚಿತ ಮಧ್ಯಪ್ರವೇಶಕ್ಕೆ ಧನ್ಯವಾದಗಳು. ಜಗ್ರೆಬ್‌ಗೆ ಪ್ರಯಾಣಿಸಲಿರುವ ಕುಸ್ತಿಪಟುಗಳು ಮತ್ತು ನೆರವು ಸಿಬ್ಬಂದಿ ಸೇರಿ 25 ಮಂದಿ ಇರುವ ತಂಡವು ಬುಧವಾರ ವೀಸಾಗೆ ಸಂಬಂಧಿಸಿದ ಔಪಚಾರಿಕತೆ ಪೂರ್ಣಗೊಳಿಸಲಿದ್ದಾರೆ’ ಎಂದು ಅಡ್‌ಹಾಕ್ ಸಮಿತಿ ಅಧ್ಯಕ್ಷ ಭೂಪೇಂದರ್ ಸಿಂಗ್ ಬಾಜ್ವಾ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಕ್ರೊವೇಷ್ಯಾ ಕುಸ್ತಿ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಟಿನ್ ಬ್ರೆಗೊವಿಚ್ ಅವರು 13 ಕುಸ್ತಿಪಟುಗಳು, ಒಂಬತ್ತು ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಮೂವರು ರೆಫರಿಗಳಿಗೆ ಆಹ್ವಾನ ಪತ್ರ ಕಳುಹಿಸಿದ್ದಾರೆ. ತಂಡವು ಸಮಯಕ್ಕೆ ಸರಿಯಾಗಿ ಜಗ್ರೆಬ್‌ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ’ ಎಂದು ಬಾಜ್ವಾ ಹೇಳಿದರು. ‘ಜಗ್ರೆಬ್ ಓಪನ್‌ನಲ್ಲಿ ಸ್ಪರ್ಧಿಸಲಿರುವ 13 ಆಟಗಾರರು ಏಪ್ರಿಲ್‌ನಲ್ಲಿ ನಡೆಯಲಿರುವ ಏಷ್ಯನ್ ಅರ್ಹತಾ ಟೂರ್ನಿ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ವಿಶ್ವ ಅರ್ಹತಾ ಟೂರ್ನಿಗೆ ತಯಾರಿ ನಡೆಸಲು ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವರು ಎಂಬ ವಿಶ್ವಾಸವಿದೆ’ ಎಂದರು. ತಂಡಗಳು: ಪುರುಷರ ಫ್ರೀಸ್ಟೈಲ್: ಅಮನ್ (57ಕೆಜಿ), ಯಶ್‌ (74 ಕೆಜಿ), ದೀಪಕ್‌ ಪೂನಿಯಾ (86 ಕೆಜಿ), ವಿಕ್ಕಿ (97ಕೆಜಿ) ಮತ್ತು ಸುಮಿತ್‌ (125 ಕೆಜಿ) ಗ್ರೀಕೊ ರೋಮನ್‌: ಜ್ಞಾನೇಂದರ್‌ (60ಕೆಜಿ), ನೀರಜ್ (67ಕೆಜಿ), ವಿಕಾಸ್ (77ಕೆಜಿ), ಸುನಿಲ್ ಕುಮಾರ್ (87ಕೆಜಿ), ನರೀಂದರ್ ಚೀಮಾ (97ಕೆಜಿ) ಮತ್ತು ನವೀನ್ (130 ಕೆಜಿ) ಮಹಿಳೆಯರು: ಸೋನಮ್‌ (62ಕೆಜಿ) ಮತ್ತು ರಾಧಿಕಾ (68ಕೆಜಿ) ಕೋಚಿಂಗ್ ಮತ್ತು ನೆರವು ಸಿಬ್ಬಂದಿ: ಕುಲದೀಪ್ ಸಿಂಗ್ (ಮುಖ್ಯಸ್ಥ ಮತ್ತು ಕೋಚ್), ವಿನೋದ್ ಕುಮಾರ್‌, ಸುಜಿತ್, ಶಶಿಭೂಷಣ್ ಪ್ರಸಾದ್, ಮನೋಜ್ ಕುಮಾರ್, ವೀರೇಂದರ್ ಸಿಂಗ್ ಮತ್ತು ಅಲ್ಕಾ ತೋಮರ್ (ತರಬೇತುದಾರರು): ವಿಶಾಲ್ ಕುಮಾರ್ ರೈ (ಫಿಜಿಯೊಥೆರಪಿಸ್ಟ್‌) ಮತ್ತು ನೀರಜ್ (ಮಸಾಜ್) ರೆಫರಿಗಳು: ಸತ್ಯದೇವ್ ಮಲ್ಲಿಕ್, ದಿನೇಶ್ ಧೋಂಡಿಬಾ ಗುಂಡ್ ಮತ್ತು ಸಂಜಯ್ ಕುಮಾರ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.