ಕುಸ್ತಿ: 16ಕ್ಕೆ ಕಾರ್ಯಕಾರಿ ಸಮಿತಿ ಸಭೆ ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ನ ಆಡಳಿತ ಮಂಡಳಿಯನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮವನ್ನು ಮುಂದಿನ ವಾರ ನ್ಯಾಯಾಲಯದಲ್ಲಿ ಪ್ರಶ್ನಿಸಲು ಡಬ್ಲ್ಯುಎಫ್‌ಐ ನಿರ್ಧರಿಸಿದೆ. ಈ ಮಧ್ಯೆ ಮುಂದಿನ ನಡೆ ಕುರಿತು ಚರ್ಚಿಸಲು ಇದೇ 16ರಂದು ನವದೆಹಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿದೆ. ರಾಷ್ಟ್ರೀಯ ಕ್ರೀಡಾ ಸಂಹಿತೆ ಮತ್ತು ಡಬ್ಲ್ಯುಎಫ್‌ಐ ನಿಯಮಾವಳಿ ಉಲ್ಲಂಘಿಸಿದ ಕಾರಣ ಉಲ್ಲೇಖಿಸಿ ಕ್ರೀಡಾ ಸಚಿವಾಲಯವು ಡಿ.24 ರಂದು ಕುಸ್ತಿ ಫೆಡರೇಷನ್‌ನ ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿತ್ತು. ‘ಸರಿಯಾಗಿ ಕಾರ್ಯನಿರ್ವಹಿಸುವ ಫೆಡರೇಷನ್ ಅಗತ್ಯವಿದೆ. ಅಮಾನತು ಕ್ರಮ ಪ್ರಶ್ನಿಸಿ ಮುಂದಿನ ವಾರ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆ ಆಗಿರುವುದರಿಂದ ಈ ಅಮಾನತು ಸ್ವೀಕಾರಾರ್ಹವಲ್ಲ. ಅಮಾನತು ಮತ್ತು ಭಾರತ ಒಲಿಂಪಿಕ್‌ ಸಮಿತಿ ರಚಿಸಿದ ಅಡ್‌ಹಾಕ್‌ ಸಮಿತಿಗೆ ಮಾನ್ಯತೆ ನೀಡುವುದಿಲ್ಲ. ಈ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ’ ಎಂದು ಅಮಾನತುಗೊಂಡಿರುವ ಆಡಳಿತ ಮಂಡಳಿ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ. ‘ಜಾಗ್ರೆಬ್ ಓಪನ್‌ ಟೂರ್ನಿಗೆ ಅಡ್‌ಹಾಕ್‌ ಸಮಿತಿಯು ಭಾರತ ತಂಡವನ್ನು ಹೇಗೆ ಘೋಷಿಸಿತು ಎಂಬುದನ್ನು ನೋಡಿದ್ದೇವೆ. ಐದು ವಿಭಾಗಗಳ ಸ್ಪರ್ಧೆಗಳಲ್ಲಿ ನಮ್ಮವರು ಪ್ರತಿನಿಧಿಸುತ್ತಿಲ್ಲ. ಇದು ಫೆಡರೇಷನ್‌ನ ಅನುಪಸ್ಥಿತಿ ತೋರಿಸುತ್ತದೆ. ಕೆಲ ವಿಭಾಗದಲ್ಲಿ ಸ್ಪರ್ಧಿಸಲು ಕುಸ್ತಿಪಟುಗಳು ಲಭ್ಯ ಇಲ್ಲದಿದ್ದರೆ ಬದಲಿ ಆಟಗಾರರನ್ನು ಏಕೆ ಆಯ್ಕೆ ಮಾಡಲಿಲ್ಲ?. ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ತಂಡವನ್ನೇ ಅವಲಂಬಿಸಿದ ಹಿಂದಿನ ಉದ್ದೇಶವೇನು? ಇತರರಿಗೆ ಸ್ಪರ್ಧಿಸಲು ಅವಕಾಶ ನೀಡಬಹುದಿತ್ತಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ‘ಭಾರತ ತಂಡ ಪ್ರತಿನಿಧಿಸಲು ಬಯಸುವ ಹಲವು ಕುಸ್ತಿಪಟುಗಳಿಂದ ನಿರಂತರವಾಗಿ ಕರೆಗಳು ಬರುತ್ತಿವೆ. ಅವರು ಟ್ರಯಲ್ಸ್‌ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಿದ್ಧರಿದ್ದಾರೆ. ಅಂಥವರಿಗೆ ನ್ಯಾಯಯುತ ಅವಕಾಶ ದೊರೆಯಲು ಫೆಡರೇಷನ್‌ ಅಗತ್ಯವಿದೆ’ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.