ಒಲಿಂಪಿಕ್ ಹಾಕಿ ಅರ್ಹತಾ ಟೂರ್ನಿ: ಭಾರತ ವನಿತೆಯರಿಗೆ ಸೋಲು ರಾಂಚಿ: ಎಫ್‌ಐಎಚ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯ ಮೊದಲ ಪಂದ್ಯದಲ್ಲಿ ಶನಿವಾರ ಅಮೆರಿಕ ಮಹಿಳಾ ಹಾಕಿ ತಂಡವು 1–0 ರಿಂದ ಭಾರತ ತಂಡವನ್ನು ಸೋಲಿಸಿದೆ. ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಭಾರತ, ಏಳು ಪೆನಾಲ್ಟಿ ಕಾರ್ನರ್‌ಗಳ ಸೇರಿದಂತೆ ಹಲವಾರು ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ, ಅಮೆರಿಕ ತಂಡದ ರಕ್ಷಣಾ ಕೋಟೆಯನ್ನು ಭೇದಿಸುವಲ್ಲಿ ವಿಫಲವಾಯಿತು. ವಿಶ್ವ ಕ್ರಮಾಂಕದಲ್ಲಿ 24ನೇ ಸ್ಥಾನದಲ್ಲಿರುವ ಅಮೆರಿಕ, 'ಬಿ' ಗುಂಪಿನ ಪಂದ್ಯದ 16ನೇ ನಿಮಿಷದಲ್ಲಿ ಅಬಿಗೈಲ್ ಟ್ಯಾಮರ್ ಏಕೈಕ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಈ ಸೋಲು ಮುಂದಿನ ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ವಿರುದ್ಧ ಸೆಣಸಲಿರುವ ಭಾರತದ ಪ್ಯಾರಿಸ್ ಒಲಿಂಪಿಕ್ಸ್‌ ಹಾದಿಯನ್ನು ಕಠಿಣಗೊಳಿಸಲಿದೆ. ಈ ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನ ಗಳಿಸುವ ತಂಡಗಳಿಗೆ ಒಲಿಂಪಿಕ್ಸ್‌ಗೆ ಟಿಕೆಟ್‌ ದೊರೆಯಲಿದೆ. ಏಳು ನಿಮಿಷಗಳ ಅಂತರದಲ್ಲಿ ಅಮೆರಿಕ ಸತತ ಮೂರು ಪೆನಾಲ್ಟಿ ಕಾರ್ನರ್‌ಗಳ ಅವಕಾಶ ಗಳಿಸಿತು. ಆದರೆ ಎಲ್ಲವನ್ನೂ ವ್ಯರ್ಥ ಮಾಡಿತು. ಅಂತಿಮವಾಗಿ ಟ್ಯಾಮರ್‌ ಗೋಲು ಗಳಿಸಿದರು. ಭಾರತ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದು, ಅಮೆರಿಕ ಇಟಲಿ ವಿರುದ್ಧ ಸೆಣಸಲಿದೆ. ದಿನದ ಇತರ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ 3–0 ರಿಂದ ಇಟಲಿ, ಜಪಾನ್ 2–0ರಿಂದ ಝೆಕ್ ರಿಪಬ್ಲಿಕ್, ಜರ್ಮನಿ 3–0 ಇಟಲಿ ವಿರುದ್ಧ ಗೆಲುವು ಸಾಧಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.