ಪ್ರೊ ಕಬಡ್ಡಿ: ಗೆಲುವಿನ ಓಟ ಮುಂದುವರಿಸಿ ಪಿಂಕ್ ಪ್ಯಾಂಥರ್ಸ್‌ ಜೈಪುರ: ಅರ್ಜುನ್ ದೇಶ್ವಾಲ್ ಅವರ ಅಮೋಘ ರೈಡಿಂಗ್ (16 ಪಾಯಿಂಟ್ಸ್‌) ನೆರವಿನಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶನಿವಾರ 36–34 ಪಾಯಿಂಟ್‌ಗಳಿಂದ ಪುಣೇರಿ ಪಲ್ಟನ್‌ ತಂಡಕ್ಕೆ ಸೋಲುಣಿಸಿತು. ಮೊದಲಾರ್ಧದಲ್ಲಿ 9 ಪಾಯಿಂಟ್‌ಗಳ ಹಿನ್ನಡೆಯಲ್ಲಿದ್ದ ಪಿಂಕ್‌ ಪ್ಯಾಂಥರ್ಸ್‌, ಉತ್ತರಾರ್ಧದಲ್ಲಿ ಹೋರಾಟ ತೋರಿ ಪುಣೇರಿ ಪಲ್ಟನ್ಸ್‌ ವಿಜಯದ ಓಟಕ್ಕೆ ತಡೆ ಒಡ್ಡಿದರು. ಈ ಗೆಲುವಿನೊಂದಿಗೆ ಪ್ಯಾಂಥರ್ಸ್ ತಂಡ ಎರಡನೇ ಸ್ಥಾನಕ್ಕೇರಿತು. ಪುಣೇರಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಇಲ್ಲಿನ ಸವಾಯಿ ಮಾನ್‌ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ಯಾಂಥರ್ಸ್ ಪರ ಅರ್ಜುನ್ ದೇಶ್ವಾಲ್ ಮತ್ತು ಸುನಿಲ್ ಕುಮಾರ್‌ ಮಿಂಚಿದರು. ತಂಡವು ರೈಡಿಂಗ್‌ನಿಂದ 20 ಮತ್ತು ಟ್ಯಾಕಲ್‌ನಿಂದ 10 ಪಾಯಿಂಟ್ಸ್ ಸಂಗ್ರಹಿಸಿತು. ಪುಣೇರಿ ಪರ ಅಸ್ಲಾಂ ಇನಾಮದಾರ್ (8) ಮತ್ತು ಪಂಕಜ್ ಮೋಹಿತೆ (4) ಅಂಕ ಸಂಪಾದಿಸಿದರು. ಬೆಂಗಾಲ್ ವಾರಿಯರ್ಸ್‌ಗೆ ಜಯ: ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು 41–37 ರಿಂದ ಯು.ಪಿ.ಯೋಧಾಸ್ ತಂಡವನ್ನು ಸೋಲಿಸಿತು. ಯೋಧಾಸ್‌ ಪರ ಪ್ರದೀಪ್ ನರ್ವಾಲ್ 16 ಅಂಕಗಳೊಂದಿಗೆ ಸೂಪರ್ ಟೆನ್‌ ಸಾಧನೆ ಮಾಡಿದರು. ವಾರಿಯರ್ಸ್ ಪರ ಮಣಿಂದರ್ ಸಿಂಗ್ (13), ನಿತಿನ್ ಕುಮಾರ್ (10) ಅಂಕ ಕಲೆ ಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.