ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌– ಚಿರಾಗ್‌ ರನ್ನರ್‌ಅಪ್‌ ಕ್ವಾಲಾಲಂಪುರ (ಪಿಟಿಐ): ಭಾರತದ ತಾರೆಗಳಾದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಫೈನಲ್‌ ಪಂದ್ಯದಲ್ಲಿ ಎಡವಿದರು. ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಪರಾಭವಗೊಂಡು, ರನ್ನರ್‌ ಅಪ್‌ ಸ್ಥಾನ ಪಡೆದರು. ಭಾನುವಾರ ನಡೆದ ಪಂದ್ಯದಲ್ಲಿ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಜೋಡಿಯು 21–9, 18–21, 17–21ರಿಂದ ವಿಶ್ವದ ಅಗ್ರಜೋಡಿಗೆ ಶರಣಾದರು. ಈ ಮೂಲಕ ಸಾತ್ವಿಕ್‌– ಚಿರಾಗ್‌ ಅವರ ಸೂಪರ್‌ 1000 ಟೂರ್ನಿಯಲ್ಲಿ ಎರಡನೇ ಪ್ರಶಸ್ತಿ ಗೆಲ್ಲುವ ಕನಸು ಕಮರಿತು. ಕಳೆದ ಜೂನ್‌ನಲ್ಲಿ ಇಂಡೊನೇಷ್ಯಾ ಓಪನ್‌ ಟೂರ್ನಿಯ ಈ ಜೋಡಿ ಮುಡಿಗೇರಿಸಿಕೊಂಡಿತ್ತು. ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತರಾದ ಸಾತ್ವಿಕ್ ಮತ್ತು ಚಿರಾಗ್ ಫೈನಲ್‌ನಲ್ಲಿ ಉತ್ತಮ ಆರಂಭ ಮಾಡಿದ್ದರು. ಮೊದಲ ಗೇಮ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಅವರು ಸುಲಭವಾಗಿ ಜಯಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ತಿರುಗಿಬಿದ್ದ ಚೀನಾದ ಆಟಗಾರರು ಸೊಗಸಾದ ಸ್ಟ್ರೋಕ್‌ಪ್ಲೇ ಮೂಲಕ ಗೇಮ್‌ನಲ್ಲಿ ಮೇಲುಗೈ ಪಡೆದು ಸಮಬಲ ಸಾಧಿಸಿದರು. ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಭಾರತದ ಜೋಡಿಯು ಆರಂಭದಲ್ಲಿ 10–3ರಿಂದ ಮುನ್ನಡೆ ಪಡೆದು ಬಲವಾದ ಹಿಡಿತ ಸಾಧಿಸಿತು. ಇನ್ನೇನು ಪ್ರಶಸ್ತಿ ಗೆದ್ದೇಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ಪುಟಿದೆದ್ದ ಕೆಂಗ್‌– ಚಾಂಗ್‌ ಜೋಡಿಯು ಫ್ರಂಟ್ ಕೋರ್ಟ್‌ನಲ್ಲಿ ಪ್ರಾಬಲ್ಯ ಮೆರೆದು 12–12ರ ಸಮಬಲ ಸಾಧಿಸಿತು. ನಂತರದಲ್ಲಿ ಫ್ಲಾಟ್‌ಪುಷ್‌ ಮತ್ತು ಡ್ರಾಪ್‌ಶಾಟ್‌ ವೇಳೆ ಭಾರತದ ಆಟಗಾರರು ಎಡವಿದರು. ಸಾತ್ವಿಕ್ ಮತ್ತು ಚಿರಾಗ್ ಅವರು ಚೀನಾದ ಈ ಜೋಡಿಯೊಂದಿಗೆ ಒಟ್ಟು 5 ಬಾರಿ ಮುಖಾಮುಖಿಯಾಗಿದ್ದು, ನಾಲ್ಕು ಬಾರಿ ಸೋತಿದ್ದಾರೆ. ಆದರೆ, ಕಳೆದ ವರ್ಷ ಕೊರಿಯಾ ಓಪನ್‌ ಸೂಪರ್‌ 500 ಟೂರ್ನಿಯಲ್ಲಿ ಮಾತ್ರ ಭಾರತದ ಆಟಗಾರರು ಗೆಲುವು ಸಾಧಿಸಿದ್ದರು. ಕೇಂದ್ರ ಕ್ರೀಡಾ ಸಚಿವಾಲಯದಿಂದ ಈಚೆಗೆ ಖೇಲ್‌ ರತ್ನ ಪ್ರಶಸ್ತಿಗೆ ಭಾಜನವಾಗಿರುವ ಸಾತ್ವಿಕ್‌– ಚಿರಾಗ್ ಜೋಡಿಯು ನವದೆಹಲಿಯಲ್ಲಿ ಗುರುವಾರ ಆರಂಭವಾಗುವ ಇಂಡಿಯಾ ಓಪನ್‌ ಸೂಪರ್‌ 750 ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.