ಹಾಕಿ: ಭಾರತಕ್ಕೆ ಮಣಿದ ನ್ಯೂಜಿಲೆಂಡ್ ರಾಂಚಿ : ಉತ್ಸಾಹಭರಿತ ಆಟವಾಡಿದ ಭಾರತದ ವನಿತೆಯರು ಭಾನುವಾರ ನಡೆದ ಎಫ್‌ಐಎಚ್‌ ಮಹಿಳಾ ಒಲಿಂಪಿಕ್‌ ಹಾಕಿ ಅರ್ಹತಾ ಟೂರ್ನಿಯ ಪಂದ್ಯದಲ್ಲಿ 3–1ರಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿದರು. ಶನಿವಾರ ಪ್ರಕಟಗೊಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ 6ರಿಂದ ಏಳನೇ ಸ್ಥಾನಕ್ಕೆ ಜಾರಿದ್ದ ಭಾರತ ತಂಡವು ಈ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿರಲಿಲ್ಲ. ಶನಿವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಅಮೆರಿಕ ವಿರುದ್ಧ 0–1ರಿಂದ ಸೋತಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತು. ಈ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು. ಭಾರತದ ಆಟಗಾರ್ತಿಯರು ಮೊದಲ ಪಂದ್ಯದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು, ಸುಧಾರಿತ ಆಟದ ಮೂಲಕ ಗೆಲುವನ್ನು ಒಲಿಸಿಕೊಂಡರು. ತನ್ನ ಮೊದಲ ಪಂದ್ಯದಲ್ಲಿ ಇಟಲಿ ವಿರುದ್ಧ 3–0ಯಿಂದ ಸುಲಭ ಜಯ ದಾಖಲಿಸಿದ್ದ ನ್ಯೂಜಿಲೆಂಡ್‌ ಆಟಗಾರ್ತಿಯರು ಇಲ್ಲಿ ಎಡವಿದರು. ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ಕುಮಾರಿ ಸಂಗೀತಾ (1ನೇ ನಿಮಿಷ) ಅವರು ಭಾರತ ತಂಡಕ್ಕೆ ಮುನ್ನಡೆ ಒದಗಿಸಿದರು. ನಂತರದಲ್ಲಿ ಉದಿತಾ (12ನೇ ನಿ), ಡಂಗ್‌ ಡಂಗ್‌ ಬ್ಯೂಟಿ (14ನೇ ನಿ) ಆತಿಥೇಯ ತಂಡದ ಪರ ಗೋಲು ದಾಖಲಿಸಿದರು. ನ್ಯೂಜಿಲೆಂಡ್‌ ಪರ ಹಲ್ ಮೇಗನ್ (9ನೇ ನಿ) ಏಕೈಕ ಗೋಲು ಗಳಿಸಿದರು. ಎಲ್ಲ ಗೋಲುಗಳು ಮೊದಲ ಕ್ವಾರ್ಟರ್‌ನಲ್ಲೇ ದಾಖಲಾಗಿದ್ದು ವಿಶೇಷ. ಅಮೆರಿಕಾ ತಂಡವು ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಮಂಗಳವಾರ ಭಾರತವು ಇಟಲಿ ವಿರುದ್ಧ, ಅಮೆರಿಕವು ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.