28 ಬ್ಯಾಡ್ಮಿಂಟನ್‌ ಆಟಗಾರರಿಗೆ ಆರ್ಥಿಕ ನೆರವು ನವದೆಹಲಿ: ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಈ ವರ್ಷ ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ಸೀನಿಯರ್‌ ರಾಷ್ಟ್ರೀಯ ಪುರುಷರ ಚಾಂಪಿಯನ್ ಚಿರಾಗ್ ಸೇನ್ ಮತ್ತು ಮಹಿಳಾ ಚಾಂಪಿಯನ್ ಅನ್ಮೋಲ್ ಖಾರ್ಬ್ ಸೇರಿದಂತೆ 28 ಆಟಗಾರರಿಗೆ ಧನಸಹಾಯ ನೀಡಲಿದೆ. ಬಿಡಬ್ಲ್ಯುಎಫ್ ವಿಶ್ವ ಶ್ರೇಯಾಂಕದಲ್ಲಿ 26 ರಿಂದ 75 ನೇ ಸ್ಥಾನದಲ್ಲಿರುವ ಭಾರತದ ಆಟಗಾರರು ಮತ್ತು ರಾಷ್ಟ್ರೀಯ ಶಿಬಿರದ ಭಾಗವಲ್ಲದ ಸೀನಿಯರ್ ನ್ಯಾಷನಲ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವವರು ಇದರ ಪ್ರಯೋಜನ ಪಡೆಯಲಿದ್ದಾರೆ. ಗ್ರಾಮೀಣ ವಿದ್ಯುದ್ದೀಕರಣ ನಿಗಮ (ಆರ್‌ಇಸಿ)ದೊಂದಿಗಿನ ಬಿಎಐ ಸಹಭಾಗಿತ್ವದ ಭಾಗವಾಗಿ ಈ ನಿಧಿ ನೀಡಲಾಗುತ್ತಿದೆ. ಅಬುಧಾಬಿ ಮಾಸ್ಟರ್ಸ್ ಚಾಂಪಿಯನ್ ಉನ್ನತಿ ಹೂಡಾ ಮತ್ತು 2023ರ ಬ್ಯಾಡ್ಮಿಂಟನ್ ಏಷ್ಯಾ (17 ವರ್ಷದೊಳಗಿನ) ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ತನ್ವಿ ಶರ್ಮಾ ಸೇರಿದಂತೆ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ‘ಭರವಸೆಯ ಪ್ರತಿಭೆಗಳು ರಾಷ್ಟ್ರೀಯ ಶಿಬಿರದ ಭಾಗವಾಗದಿದ್ದರೂ ರಾಷ್ಟ್ರೀಯ ಶಿಬಿರಾರ್ಥಿಗಳಾಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅಗತ್ಯ ಬೆಂಬಲ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬಿಎಐ ಬದ್ಧವಾಗಿದೆ’ ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಯ್ಕೆಯಾದ ಆಟಗಾರರಿಗೆ ಒಟ್ಟು ಎಂಟು ಪಂದ್ಯಾವಳಿಗಳಿಂದ ಎರಡು ಸೂಪರ್ 300 ಸ್ಪರ್ಧೆಗಳಾದ ಓರ್ಲಿಯನ್ಸ್ ಮಾಸ್ಟರ್ಸ್ ಮತ್ತು ಸ್ವಿಸ್ ಓಪನ್ ಸೇರಿದಂತೆ ಮೂರು ಪಂದ್ಯಾವಳಿಗಳನ್ನು ಆಯ್ಕೆ ಮಾಡಬಹುದಾಗಿದ. ಇದಕ್ಕಾಗಿ ಬಿಎಐ ಪ್ರತಿ ಆಟಗಾರನಿಗೆ ಸಂಪೂರ್ಣ ಹಣಕಾಸಿನ ನೆರವು ನೀಡುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.