ಹಾಕಿ: ಹೈಪರ್ಫಾಮೆನ್ಸ್ ನಿರ್ದೇಶಕರಾಗಿ ಹರ್ಮನ್ ಕ್ರೂಸ್ ನೇಮಕ ನವದೆಹಲಿ: ಭಾರತ ಹಾಕಿ ತಂಡಗಳಿಗೆ ನೆದರ್ಲೆಂಡ್ಸ್‌ನ ಹರ್ಮನ್ ಕ್ರೂಸ್ ಅವರನ್ನು ಹೈಪರ್ಫಾಮೆನ್ಸ್ ನಿರ್ದೇಶಕರನ್ನಾಗಿ ಮಂಗಳವಾರ ನೇಮಕ ಮಾಡಲಾಗಿದೆ. ಅವರ ಅಧಿಕಾರವಧಿ ಸೆಪ್ಟೆಂಬರ್‌ ವರೆಗೆ ಇರಲಿದೆ. ತರಬೇತುದಾರರ ಶಿಕ್ಷಣ ಮಾರ್ಗ ಸೇರಿದಂತೆ ಹಾಕಿ ಇಂಡಿಯಾದ ರಾಷ್ಟ್ರೀಯ ಜೂನಿಯರ್ ಮತ್ತು ಸೀನಿಯರ್‌ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಅವರು ನೋಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಕ್ರೂಸ್‌ ಅವರು ಎರಡು ದಶಕಗಳ ಕೋಚಿಂಗ್ ಅನುಭವ ಹೊಂದಿದ್ದಾರೆ. ಈ ಹಿಂದೆ ಕ್ರಮವಾಗಿ ಎಫ್ಐಎಚ್ ಪುರುಷರ ಜೂನಿಯರ್ ವಿಶ್ವಕಪ್ ಮತ್ತು ಎಫ್ಐಎಚ್ ಮಹಿಳಾ ಜೂನಿಯರ್ ವಿಶ್ವಕಪ್‌ಗೆ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಭಾರತ ಪುರುಷರ ಮತ್ತು ಜೂನಿಯರ್ ಮಹಿಳಾ ತಂಡಗಳ ತರಬೇತುದಾರರಾಗಿ ನೇಮಕಗೊಂಡಿದ್ದರು. ನೆದರ್ಲೆಂಡ್ಸ್‌ ಮೂಲದ ಡೆನ್ ಬಾಷ್ ಲೇಡೀಸ್ ಕ್ಲಬ್‌ಗೆ ಮುಖ್ಯ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ ಮತ್ತು ಅವರ ಅಧಿಕಾರಾವಧಿಯಲ್ಲಿ ತಂಡವು ಸತತ ಎಂಟು ಬಾರಿ ಯುರೋಪಿಯನ್ ಕಪ್ ಗೆದ್ದಿದೆ. 2006ರಿಂದ 2008ರ ವರೆಗೆ ನೆದರ್ಲೆಂಡ್ಸ್‌ನ ಒಳಾಂಗಣ ಹಾಕಿಯ ಮಹಿಳಾ ತಂಡದ ಮುಖ್ಯ ತರಬೇತುದಾರರಾಗಿದ್ದರು ಹಾಗೂ 2008 ರಿಂದ 2010ರ ವರೆಗೆ ನೆದರ್ಲೆಂಡ್ಸ್‌ ಹೊರಾಂಗಣ ತಂಡಕ್ಕೆ ಮುಖ್ಯ ತರಬೇತುದಾರರಾಗಿದ್ದರು. 2016 ರಿಂದ 2023ರ ವರೆಗೆ ಬೆಲಾರಸ್ ಒಳಾಂಗಣ ಮತ್ತು ಹೊರಾಂಗಣ ತಂಡದ ಮುಖ್ಯ ತರಬೇತುದಾರರಾಗಿದ್ದರು. ಕ್ರೂಸ್ ಅವರು ಪ್ರಮಾಣೀಕೃತ ಎಫ್ಐಎಚ್ ತರಬೇತುದಾರ-ಶಿಕ್ಷಣತಜ್ಞರಾಗಿದ್ದಾರೆ. ‘ಜೂನಿಯರ್ ಮತ್ತು ಸೀನಿಯರ್ ಕಾರ್ಯಕ್ರಮಗಳು ಸೇರಿದಂತೆ ಹಾಕಿ ಇಂಡಿಯಾ ನಡೆಸುವ ವಿವಿಧ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಅವರು ನೋಡಿಕೊಳ್ಳಲಿದ್ದಾರೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಹೇಳಿದ್ದಾರೆ. ಹೈಪರ್ಫಾಮೆನ್ಸ್ ನಿರ್ದೇಶಕರನ್ನಾಗಿ ನೇಮಕಗೊಂಡ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಕ್ರೂಸ್, ‘ಭಾರತ ತಂಡಗಳು ಇತಿಹಾಸವನ್ನು ರಚಿಸುವ ಹೊಸ್ತಿಲಲ್ಲಿವೆ. ಈ ವರ್ಷದ ಗುರಿ ಸಾಧಿಸಲು ತಂಡಗಳು ಮತ್ತು ಹಾಕಿ ಇಂಡಿಯಾಕ್ಕೆ ಸಹಾಯ ಮಾಡಲಾಗುವುದು ’ ಎಂದು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.