‌ಪ್ರೊ ಕಬಡ್ಡಿ: ಮುಂದುವರಿದ ಟೈಟನ್ಸ್ ಸೋಲಿನ ಸರಣಿ- ವಾರಿಯರ್ಸ್‌ಗೆ ಸುಲಭ ಗೆಲುವು ಮುಂಬೈ: ಅನುಭವಿ ರೇಡರ್‌ ನಿತಿನ್ ಕುಮಾರ್ ಮತ್ತು ವಿಶ್ವಾಸ್‌ ಅವರ ದಾಳಿಯ ಬಲದಿಂದ ಬೆಂಗಾಲ್ ವಾರಿಯರ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಏಕಪಕ್ಷೀಯ ಪಂದ್ಯದಲ್ಲಿ ಮಂಗಳವಾರ ತೆಲುಗು ಟೈಟನ್ಸ್ ತಂಡವನ್ನು 20 ಪಾಯಿಂಟ್‌ಗಳಿಂದ ಸುಲಭವಾಗಿ ಸೋಲಿಸಿತು. ತನ್ಮೂಲಕ ಟೈಟನ್ಸ್ ಸೋಲಿನ ಸರಣಿ ಮುಂದುವರಿದಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಾರಿಯರ್ಸ್ 46–26 ರಿಂದ ಟೈಟನ್ಸ್‌ ವಿರುದ್ದ ಜಯಿಸಿತು. ಲೀಗ್‌ನಲ್ಲಿ ಆಡಿರುವ ಹತ್ತು ಪಂದ್ಯಗಳ ಪೈಕಿ ಮೂರು ಪಂದ್ಯದಲ್ಲಿ ಗೆದ್ದು, ಐದು ಪಂದ್ಯ ಸೋತು, ಎರಡು ಪಂದ್ಯದಲ್ಲಿ ಡ್ರಾ ಸಾಧಿಸುವುದರೊಂದಿಗೆ ವಾರಿಯರ್ಸ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ (23 ಅಂಕ) ಒಂಬತ್ತನೇ ಸ್ಥಾನದಲ್ಲಿದೆ. ಟೈಟನ್ಸ್‌ ತಂಡವು ಹತ್ತು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು, ಒಂಬತ್ತರಲ್ಲಿ ಸೋತು ಪಾಯಿಂಟ್‌ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಮೊದಲಾರ್ಧದಲ್ಲಿ 27–10ರಲ್ಲಿ ಮುಂದಿದ್ದ ವಾರಿಯರ್ಸ್ ಪರ ದಾಳಿಯಲ್ಲಿ ವೈಭವ್ ಭಾವುಸಾಹೇಬ್ ಗರ್ಜೆ (9 ಪಾಯಿಂಟ್‌), ನಿತಿನ್ ಕುಮಾರ್ (9), ವಿಶ್ವಾಸ (8) ಮಿಂಚಿದರು. ಸಹ ಆಟಗಾರ ಶುಭಂ ಶಿಂಧೆ ಟ್ಯಾಕಲ್‌ನಲ್ಲಿ ಆರು ಅಂಕ ಗಳಿಸಿದರು. ವಾರಿಯರ್ಸ್‌ ತಂಡವು ರೈಡಿಂಗ್‌ನಿಂದ 20 ಅಂಕ ಗಳಿಸಿದರೆ, ಟ್ಯಾಕಲ್‌ನಿಂದ 19 ಪಾಯಿಂಟ್ಸ್‌ ಸಂಪಾದಿಸಿತು. ಅಲ್ಲದೆ, ಮೂರು ಬಾರಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ ಗಮನ ಸೆಳೆಯಿತು. ತೆಲುಗು ಟೈಟನ್ಸ್‌ ಪರ ಪವನ್ ಶೆರಾವತ್ ‘ಸೂಪರ್ ಟೆನ್’ (11 ಪಾಯಿಂಟ್‌) ಸಾಧನೆ ಮಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಸಂದೀಪ್ ಧುಲ್ (4) ಅಂಕ ಗಳಿಸಿದರು. ವಾರಿಯರ್ಸ್ ತಂಡ ಇಂದಿನ ಪಂದ್ಯಗಳು: ಯು.ಪಿ.ಯೋಧಾಸ್‌–ತಮಿಳ್ ತಲೈವಾಸ್‌ (ರಾತ್ರಿ 8), ಯು. ಮುಂಬಾ–ಹರಿಯಾಣ ಸ್ಟೀಲರ್ಸ್‌ (ರಾತ್ರಿ 9) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.