ಏಷ್ಯನ್‌ ಬ್ಯಾಡ್ಮಿಂಟನ್‌ಗೆ ಪಿ.ವಿ.ಸಿಂಧು ನವದೆಹಲಿ: ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿರುವ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ.ಸಿಂಧು ಅವರು ಏಷ್ಯನ್ ಟೀಮ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿ ರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮಲೇಷ್ಯಾದ ಶಾ ಆಲಮ್‌ನಲ್ಲಿ ಫೆ. 13 ರಿಂದ 19ರವರೆಗೆ ಈ ಟೂರ್ನಿ ನಡೆಯಲಿದೆ. ವಿಶ್ವದ 8ನೇ ಕ್ರಮಾಂಕದ ಆಟಗಾರ ಎಚ್‌.ಎಸ್‌.ಪ್ರಣಯ್ ತಂಡದ ನಾಯಕತ್ವ ವಹಿಸುವರು. ಕಳೆದ ವರ್ಷ ಫ್ರೆಂಚ್‌ ಓಪನ್ ಟೂರ್ನಿಯ ವೇಳೆ ಸಿಂಧು ಗಾಯಾಳಾಗಿದ್ದರು. ನಂತರ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ. ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆಗೆ ಅಮೂಲ್ಯ ಕ್ವಾಲಿಫಿಕೇಷನ್ ಪಾಯಿಂಟ್‌ಗಳನ್ನು ಪಡೆಯುವ ದೃಷ್ಟಿಯಿಂದ ಭಾರತದ ಬ್ಯಾಡ್ಮಿಂಟನ್‌ ಪಟುಗಳಿಗೆ ಈ ಟೂರ್ನಿ ಮಹತ್ವದ್ದು. ಸಿಂಧು ಅಲ್ಲದೇ, ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಆಗಿರುವ 16ರ ಹರೆಯದ ಅನ್ಮೋಲ್ ಖಾರ್ಬ್, ಏಷ್ಯ ಜೂನಿಯರ್‌ ಚಾಂಪಿಯನ್‌ಷಿಪ್‌ನ ಪದಕ ವಿಜೇತೆ ತನ್ವಿ ಶರ್ಮಾ, ಅಶ್ಮಿತಾ ಚಾಲಿಹಾ ಅವರೂ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಅವಕಾಶ ಪಡೆದಿದ್ದಾರೆ. ತಂಡದಲ್ಲಿ ಸೇನ್ ಸೋದರರು: ಪುರುಷರ ತಂಡದಲ್ಲಿರುವ ಅಂತರ ರಾಷ್ಟ್ರೀಯ ಆಟಗಾರ ಲಕ್ಷ್ಯ ಅವರ ಸಂತಸ ಹೆಚ್ಚಿದೆ. ಅವರ ಅಣ್ಣ ಚಿರಾಗ್ ಸೇನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚಿರಾಗ್ ಕಳೆದ ತಿಂಗಳು ಗುವಾಹಟಿಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ತಂಡ ಇಂತಿದೆ: ಪುರುಷರು: ಎಚ್‌.ಎಸ್‌.ಪ್ರಣಯ್‌, ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್‌, ಚಿರಾಗ್ ಸೇನ್, ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ, ಚಿರಾಗ್ ಶೆಟ್ಟಿ, ಧ್ರುವ್ ಕಪಿಲ, ಎಂ.ಆರ್‌.ಅರ್ಜುನ್, ಸೂರಜ್ ಗಾವೊಲ, ಪ್ರಥ್ವಿ ರಾಯ್. ಮಹಿಳೆಯರು: ಪಿ.ವಿ.ಸಿಂಧು, ಅನ್ಮೋಲ್ ಖಾರ್ಬ್, ತನ್ವಿ ಶರ್ಮಾ, ಅಶ್ಮಿತಾ ಚಾಲಿಹಾ, ಟ್ರೀಸಾ ಜೋಳಿ, ಗಾಯತ್ರಿ ಗೋಪಿಚಂದ್, ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟೊ, ಪ್ರಿಯಾ ದೇವಿ ಕೊಂಜೆಂಗ್‌ಬಮ್, ಶ್ರುತಿ ಮಿಶ್ರಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.