ಶೂಟಿಂಗ್ | ವಿಜಯವೀರ್‌ಗೆ ಬೆಳ್ಳಿ, ಒಲಿಂಪಿಕ್ಸ್‌ಗೆ ಅರ್ಹತೆ ಜಕಾರ್ತಾ: ಭಾರತದ ವಿಜಯವೀರ್‌ ಸಿಧು ಏಷ್ಯನ್‌ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ನ ಪುರುಷರ 25 ಮೀಟರ್ ರ್‍ಯಾಪಿಡ್‌ ಫೈರ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಜೊತೆಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಕೋಟಾ ಸ್ಥಾನ ಗಿಟ್ಟಿಸಿದ ದೇಶದ 17ನೇ ಶೂಟರ್‌ ಎನಿಸಿದರು. ಹಿಂದಿನ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತ 15 ಸ್ಪರ್ಧಿಗಳ ಶೂಟಿಂಗ್ ತಂಡವನ್ನು ಕಳುಹಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಬಾರಿ 17 ಮಂದಿ ಇದುವರೆಗೆ ಅರ್ಹತೆ ಪಡೆದಿದ್ದಾರೆ. ಕಳೆದ ವರ್ಷ ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದಿದ್ದ ವಿಜಯವೀರ್‌, 577 ಅಂಕಗಳೊಂದಿಗೆ ನಾಲ್ಕನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದರು. ಇದೇ ಸ್ಪರ್ಧೆಯಲ್ಲಿ ಭಾರತದ ಅನೀಶ್‌ ಭಾನವಾಲಾ ಈ ಹಿಂದೆಯೇ ಅರ್ಹತೆ ಪಡೆದಿದ್ದಾರೆ. ಅವರು ಕಳೆದ ವರ್ಷ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದು ಒಲಿಂಪಿಕ್ಸ್‌ ಕೋಟಾ ಸಂಪಾದಿಸಿದ್ದರು. ಶನಿವಾರ ಅಂತಿಮ ಸುತ್ತಿಗೆ ಅರ್ಹತೆ ಪಡೆದ ಆರು ಸ್ಪರ್ಧಿಗಳಲ್ಲಿ ನಾಲ್ವರು ಕೋಟಾ ಸ್ಥಾನಗಳಿಗೆ ಅರ್ಹರಾಗಿದ್ದರು. ಚಂಡೀಗಢ ಮೂಲದ ಈ ಸ್ಪರ್ಧಿ ಎಲಿಮಿನೇಷನ್ ಸುತ್ತಿನಲ್ಲಿ 28 ಅಂಕಗಳನ್ನು ಗಳಿಸಿ ಬೆಳ್ಳಿ ಗೆದ್ದರೆ, 32 ಅಂಕಗಳನ್ನು ಗಳಿಸಿದ ಕಜಕಿಸ್ತಾನದ ನಿಕಿತಾ ಚಿರ್ಯುಕಿನ್ ಚಿನ್ನ ಗೆದ್ದರು. ರ‍್ಯಾಪಿಡ್‌ಫೈರ್‌ ಪಿಸ್ತೂಲ್‌ನಲ್ಲಿ ಭಾರತದ ಸಾಧನೆ ಚೆನ್ನಾಗಿಯೇ ಇದೆ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ವಿಜಯ್ ಕುಮಾರ್‌ ಈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಜಕಾರ್ತಾ ಕೂಟದಲ್ಲಿ ಇದುವರೆಗೆ ಭಾರತದ ನಾಲ್ವರು– ಇಶಾ ಸಿಂಗ್ (ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್), ವರುಣ್ ತೋಮಾರ್ (ಪುರುಷರ 10 ಮೀಟರ್ ಏರ್ ಪಿಸ್ತೂಲ್), ರಿದಂ ಸಾಂಗ್ವಾನ್ (ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್) ಮತ್ತು ವಿಜಯ್‌ವೀರ್‌ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಂತಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.