ವಿದೇಶದಲ್ಲಿ ತರಬೇತಿ: ಮೀರಾಬಾಯಿ ಚಾನು, ಕಿಶೋರ್‌ಗೆ ಸಚಿವಾಲಯದ ಸಮ್ಮತಿ ನವದೆಹಲಿ: ಒಲಿಂಪಿಕ್ಸ್‌ಗೆ ಸಿದ್ಧತೆಯಾಗಿ ಅಂತರರಾಷ್ಟ್ರೀಯ ಜಾವೆಲಿನ್ ಥ್ರೊ ಸ್ಪರ್ಧಿ ಕಿಶೋರ್ ಕುಮಾರ್ ಜೇನಾ ಅವರಿಗೆ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುವುದಕ್ಕೆ ಕ್ರೀಡಾ ಸಚಿವಾಲಯ ಸಮ್ಮತಿ ನೀಡಿದೆ. ಟೋಕಿಯೊ ಒಲಿಂಪಿಕ್ಸ್‌ ಪದಕ ವಿಜೇತೆ ಮೀರಾಬಾಯಿ ಚಾನು ಅವರಿಗೆ ಅಮೆರಿಕದಲ್ಲಿ ಪುನಶ್ಚೇತನ– ತರಬೇತಿ ಪಡೆಯುವುದಕ್ಕೂ ನೆರವು ನೀಡಲು ಒಪ್ಪಿಕೊಂಡಿದೆ. ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ಕಿಶೋರ್‌ 78 ದಿನಗಳ ಕಾಲ ತರಬೇತಿ ಪಡೆಯಲಿದ್ದು ಈ ವೆಚ್ಚವನ್ನು ಸಚಿವಾಲಯ ಭರಿಸಲಿದೆ. ಚಾನು ಅವರು ಅಮೆರಿಕದ ಸೇಂಟ್‌ ಲೂಯಿಯಲ್ಲಿ ಡಾ.ಆರನ್ ಹೊರ್ಷಿಗ್ ಅವರ ಮಾರ್ಗದರ್ಶನ ಪಡೆಯಲಿದ್ದಾರೆ. ಅವರ ಜೊತೆ ಚೀಫ್ ಕೋಚ್ ವಿಜಯ್ ಶರ್ಮಾ ಸಹ ಇರುತ್ತಾರೆ. ‌ಕ್ರೀಡಾ ಸಚಿವಾಲಯವು ‘ಟಾಪ್ಸ್‌’ (ಟಾರ್ಗೆಟ್‌ ಒಲಿಂಪಿಕ್ ಪೋಡಿಯಂ ಸ್ಕೀಮ್‌) ಯೋಜನೆಯಡಿ ಜೇನಾ, ಅವರ ಕೋಚ್ ಮತ್ತು ಫಿಜಿಯೊಥೆರಪಿಸ್ಟ್ ಅವರ ವಿಮಾನಯಾನದ ವೆಚ್ಚ, ಊಟ, ವಸತಿ ವೆಚ್ಚ ಭರಿಸಲಿದೆ ಎಂದು ಪ್ರಟಕಣೆ ತಿಳಿಸಿದೆ. ಕುಸ್ತಿಪಟುಗಳಾದ ದೀಪಕ್ ಪೂನಿಯಾ (ಫ್ರೀಸ್ಟೈಲ್), ಆಶು (ಗ್ರೀಕೊ ರೋಮನ್) ಮತ್ತು ರೋನಿತ್‌ ಶರ್ಮಾ (ಗ್ರೀಕೊ ರೋಮನ್) ಅವರಿಗೆ ಹೊರದೇಶಗಳಲ್ಲಿ ತರಬೇತಿ ಪಡೆಯುವುದಕ್ಕೂ ನೆರವು ನೀಡಲು ಸಚಿವಾಲಯ ಒಪ್ಪಿಕೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.