ಏಷ್ಯನ್‌ ಒಲಿಂಪಿಕ್ಸ್‌ ಶೂಟಿಂಗ್: ಶೆರಾನ್‌ಗೆ ಚಿನ್ನ, ತೋಮಾರ್‌ಗೆ ಬೆಳ್ಳಿ ಜಕಾರ್ತಾ; ಏಷ್ಯನ್‌ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ನಲ್ಲಿ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಶುಕ್ರವಾರ ಭಾರತದ ಶೂಟರ್‌ಗಳಾದ ಅಖಿಲ್ ಶೆರಾನ್ ಮತ್ತು ಐಶ್ವರಿ ಪ್ರತಾಪ್‌ ಸಿಂಗ್ ತೋಮಾರ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಈ ಕೂಟದಲ್ಲಿ ಭಾರತ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರಿದಿದೆ. ಎಂಟು ಪುರುಷರ ಫೈನಲ್‌ನಲ್ಲಿ ಶೆರಾನ್ 460.2 ಅಂಕ ಗಳಿಸಿ ಜಯಶಾಲಿಯಾದರೆ, ಟೋಕಿಯೊ ಒಲಿಂಪಿಯನ್ ತೋಮಾರ್ 459.0 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಥಾಯ್ಲೆಂಡ್‌ನ ಥೊಂಗ್ಫಾಫಮ್ ವೊಂಗ್ಸುಕ್ಡಿ 448.8 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಶೆರಾನ್ ಮತ್ತು ತೋಮಾರ್ ಜೋಡಿ ಸ್ವಪ್ನಿಲ್ ಕುಸಾಲೆ ಅವರೊಂದಿಗೆ ಸೇರಿಕೊಂಡು ಚೀನಾ ಮತ್ತು ದಕ್ಷಿಣ ಕೊರಿಯಾದ ತಂಡಗಳನ್ನು ಹಿಂದಿಕ್ಕಿ ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಭಾರತ ಸ್ಪರ್ಧಿಗಳು ಒಟ್ಟು 1758 ಅಂಕಗಳನ್ನು ಗಳಿಸಿದ್ದು, ಎರಡನೇ ಸ್ಥಾನದಲ್ಲಿರುವ ತಂಡಕ್ಕಿಂತ 14 ಅಂಕಗಳು ಹೆಚ್ಚಾಗಿದೆ. ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ತೋಮಾರ್ ಒಟ್ಟು 588 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರೆ, ಶೆರಾನ್ 586 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು. ಭಾರತದ ನೀರಜ್ ಕುಮಾರ್ ಚೈನ್ ಸಿಂಗ್ ಕೂಡ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದರು. ಆದರೆ, ಕ್ರಮಾಂಕದ ಅಂಕಗಳನ್ನು ಗಳಿಸಲು ಮಾತ್ರ ಅರ್ಹತೆ ಪಡೆದರು ಮತ್ತು ಫೈನಲ್‌ ಪ್ರವೇಶಿಸಲು ಅರ್ಹರಾಗಲಿಲ್ಲ. ಈ ಮೂಲಕ ಭಾರತ 10 ಚಿನ್ನ, 8 ಬೆಳ್ಳಿ ಹಾಗೂ 6 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. 50 ಮೀಟರ್ ರೈಫಲ್ 3 ‍ಪೊಸಿಷನ್‌ನಲ್ಲಿ ಐಶ್ವರಿ ದ್ವಿತೀಯ, ಶೆರಾನ್ ಮೂರನೇ ಮತ್ತು ಸ್ವಪ್ನಿಲ್ (584) ನಾಲ್ಕನೇ ಅರ್ಹತಾ ಸ್ಥಾನ‌ ಪಡೆದರೆ, ಚೀನಾದ ಯು ಹಾವೊ 589 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ರ್‍ಯಾಪಿಡ್‌ ಫೈರ್ ಕೋಟಾಗಳನ್ನು ಶನಿವಾರ ನಿರ್ಧರಿಸಲಾಗುವುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.