ಪ್ರೊ ಕಬಡ್ಡಿ: ತವರಿನಲ್ಲಿ ಪಿಂಕ್ ಪ್ಯಾಂಥರ್ಸ್‌ ಶುಭಾರಂಭ ಜೈಪುರ: ಆತಿಥೇಯ ಪಿಂಕ್‌ ಪ್ಯಾಂಥರ್ಸ್ ತಂಡ, ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ ಪಂದ್ಯದಲ್ಲಿ ಶುಕ್ರವಾರ 38–35ರಲ್ಲಿ ತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿ ತವರಿನ ಚರಣದಲ್ಲಿ ಶುಭಾರಂಭ ಮಾಡಿತು. ಇಲ್ಲಿನ ಸವಾಯಿ ಮಾನ್‌ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ಯಾಂಥರ್ಸ್ ಪರ ಅವರ ಅಮೋಘ ರೈಡಿಂಗ್ ಮಾಡಿದ ಅರ್ಜುನ್ ದೇಶ್ವಾಲ್ (17 ಪಾಯಿಂಟ್ಸ್‌) ಮತ್ತು ರೆಜಾ ಮಿರ್ಬಗೇರಿ (5) ಮಿಂಚಿದರು. ಟೈಟನ್ಸ್ ಪರ ರೈಡರ್ ಪವನ್ ಸೆಹ್ರಾವತ್ (12 ಪಾಯಿಂಟ್ಸ್‌) ‘ಸೂಪರ್ ಟೆನ್’ ಸಾಧನೆ ಮಾಡಿದರೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ. ಸಹ ಆಟಗಾರರಾದ ಸಂದೀಪ್ ಧುಲ್ ಆರು ಪಾಯಿಂಟ್‌ ಮತ್ತು ರಾಬಿನ್ ಚೌಧರಿ ಐದು ಅಂಕ ಕಲೆ ಹಾಕಿ ಬೆಂಬಲ ನೀಡಿದರು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ಆಟಗಾರರು ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಪ್ಯಾಂಥರ್ಸ್ ತಂಡವು ರೈಡಿಂಗ್‌ನಿಂದ 19 ಅಂಕ ಗಳಿಸಿದರೆ, ಟ್ಯಾಕಲ್‌ನಿಂದ 11 ಅಂಕ ಸಂಪಾದಿಸಿತು. ಅಲ್ಲದೆ, ಉಭಯ ತಂಡಗಳು ಎರಡು ಬಾರಿ ಆಲೌಟ್‌ ಆದವು. 11 ಪಂದ್ಯಗಳಿಂದ ಏಳು ಗೆದ್ದು 43 ಅಂಕಗಳೊಂದಿಗೆ ಪಿಂಕ್ ಪ್ಯಾಂಥರ್ಸ್‌ ಎರಡನೇ ಸ್ಥಾನದಲ್ಲಿದ್ದರೆ, ಹನ್ನೇರಡು ಪಂದ್ಯಗಳಲ್ಲಿ ಹನ್ನೊಂದು ಸೋತ ಟೈಟನ್ಸ್‌ ಕೊನೆ ಸ್ಥಾನದಲ್ಲಿದೆ. ಪುಣೇರಿಗೆ ಗೆಲುವು: ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವು 37–17 ರಿಂದ ಗುಜರಾತ್ ಜೇಂಟ್ಸ್‌ ತಂಡವನ್ನು ಸೋಲಿಸಿತು. ಪುಣೇರಿ ಪರ ಅಸ್ಲಾಂ ಇನಾಮ್ದಾರ್ ಸೂಪರ್ ಟೆನ್ ಸಾಧನೆ ಮಾಡಿದರು. ಟ್ಯಾಕಲ್‌ನಲ್ಲಿ ಗೌರವ್ ಖತ್ರಿ ಮಿಂಚಿದರು. ಇಂದಿನ ಪಂದ್ಯ: ಜೈಪುರ ಪಿಂಕ್‌ ಪ್ಯಾಂಥರ್ಸ್‌–ಪುಣೇರಿ ಪಲ್ಟನ್ (ರಾತ್ರಿ 8) ಯು.ಪಿ.ಯೋಧಾಸ್–ಬೆಂಗಾಲ್ ವಾರಿಯರ್ಸ್ (ರಾತ್ರಿ 9) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.