ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್‌ | ಫೈನಲ್‌ಗೆ ಸಾತ್ವಿಕ್‌–ಚಿರಾಗ್‌ ಜೋಡಿ ಕ್ವಾಲಾಲಂಪುರ: ವಿಶ್ವ ಚಾಂಪಿಯನ್‌ ಜೋಡಿಯಾದ ಸಿಯೊ ಸಿಯುಂಗ್ ಜೆ ಮತ್ತು ಕಾಂಗ್ ಮಿನ್ ಹ್ಯುಕ್‌ ಅವರನ್ನು ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಶನಿವಾರ ಫೈನಲ್‌ಗೆ ಲಗ್ಗೆ ಇಟ್ಟರು. ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸಾತ್ವಿಕ್–ಚಿರಾಗ್ ಜೋಡಿ 21–18, 22–20 ರಿಂದ ಕೊರಿಯಾದ ಕಾಂಗ್–ಸಿಯೊ ಜೋಡಿಯನ್ನು ಸೋಲಿಸಲು ಕೇವಲ 47 ನಿಮಿಷ ತೆಗೆದುಕೊಂಡಿತು. ಕೊರಿಯಾ ಆಟಗಾರರು ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಏಷ್ಯನ್‌ ಗೇಮ್ಸ್‌ ಚಾಂಪಿಯನ್ನರಾದ ಭಾರತದ ಆಟಗಾರರು ಶುಕ್ರವಾರ ಚೀನಾದ ರೆನ್‌ ಷಿಯಾಂಗ್ ಯು ಮತ್ತು ಹ ಜಿ ಟಿಂಗ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು. ಕಳೆದ ವರ್ಷ ಜೂನ್‌ನಲ್ಲಿ ನಡೆದ ಇಂಡೊನೇಷ್ಯಾ ಓಪನ್‌ನಲ್ಲಿ ಮೊದಲ ಪ್ರಶಸ್ತಿ ಗೆದ್ದಿದ್ದ ಸಾತ್ವಿಕ್–ಚಿರಾಗ್, ಎರಡನೇ ಸೂಪರ್ 1000 ಪ್ರಶಸ್ತಿ ಗೆಲ್ಲಲು ಒಂದು ಹೆಜ್ಜೆಯಷ್ಟೇ ಬಾಕಿ ಇದೆ. ಆ ಟೂರ್ನಿಯ ಸೆಮಿಫೈನಲ್‌ನಲ್ಲೂ ಭಾರತದ ಆಟಗಾರರು ಇದೇ ಕೊರಿಯಾ ಜೋಡಿಯನ್ನು ಸೋಲಿಸಿದ್ದರು. ಒಟ್ಟಾರೆ ಸಾತ್ವಿಕ್ ಮತ್ತು ಚಿರಾಗ್ ಈಗ ವಿಶ್ವದ 3ನೇ ಕ್ರಮಾಂಕದ ಸಿಯೊ ಮತ್ತು ಕಾಂಗ್ ವಿರುದ್ಧ 3:1 ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ. ಸಾತ್ವಿಕ್ ಮತ್ತು ಚಿರಾಗ್ ಕಳೆದ ವರ್ಷ ಏಷ್ಯನ್ ಗೇಮ್ಸ್ ಚಿನ್ನ, ಏಷ್ಯನ್ ಚಾಂಪಿಯನ್‌ಷಿಪ್, ಇಂಡೊನೇಷ್ಯಾ ಸೂಪರ್ 1000, ಕೊರಿಯಾ ಸೂಪರ್ 500 ಮತ್ತು ಸ್ವಿಸ್ ಓಪನ್ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.