ಬೆಂಗಳೂರು ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ಟೂರ್ನಿ: ಹಲವು ಜಿಎಂ ಆಟಗಾರರಿಗೆ ಹಿನ್ನಡೆ ಬೆಂಗಳೂರು: ನಗರದ ಶಾಲಾ ವಿದ್ಯಾರ್ಥಿ ಸಾತ್ವಿಕ್ ಅಡಿಗ ಮತ್ತು ತಮಿಳುನಾಡಿನ ವಿ.ರಾಘವ್, ಗುರುವಾರ ಆರಂಭವಾದ ಬೆಂಗಳೂರು ಇಂಟರ್‌ನ್ಯಾಷನಲ್ ಗ್ರ್ಯಾಂಡ್‌ಮಾಸ್ಟರ್ಸ್‌ ಓಪನ್ ಚೆಸ್‌ ಟೂರ್ನಿಯ (ಕೆಟಗರಿ ಎ) ಮೊದಲ ಸುತ್ತಿನಲ್ಲಿ ಗ್ರ್ಯಾಂಡ್‌ಮಾಸ್ಟರ್ಸ್‌ಗಳ ಜೊತೆ ಪಾಯಿಂಟ್‌ ಹಂಚಿಕೊಳ್ಳುವ ಮೂಲಕ ಗಮನ ಸೆಳೆದರು. ಮೊದಲ ಸುತ್ತಿನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಆಟಗಾರರಿಗೆ ಯುವ ಪ್ರತಿಭಾನ್ವಿತರು ತೀವ್ರ ಪೈಪೋಟಿ ನೀಡಿದರು. ಮಹಾರಾಷ್ಟ್ರದ ಗ್ರ್ಯಾಂಡ್‌ಮಾಸ್ಟರ್‌ ಸಂಕಲ್ಪ್‌ ಗುಪ್ತಾ, ತೆಲಂಗಾಣದ ಫಿಡೆಮಾಸ್ಟರ್‌ ಮಟ್ಟಾ ವಿನಯಕುಮಾರ್ ಅವರಿಗೆ 64 ನಡೆಗಳಲ್ಲಿ ಸೋತಿದ್ದು ದಿನದ ದೊಡ್ಡ ಅನಿರೀಕ್ಷಿತವಾಗಿತ್ತು. ಒಟ್ಟಾರೆ ಮೊದಲ ಹತ್ತು ಬೋರ್ಡ್‌ಗಳಲ್ಲಿ ಐವರು ಜಿಎಂ ಆಟಗಾರರು ‘ಡ್ರಾ’ ಮಾಡಿಕೊಂಡರೆ, ಒಬ್ಬರು ಸೋಲನುಭವಿಸಿದರು. ಜೊತೆಗೆ ಇನ್ನೂ ಕೆಲವು ಜಿಎಂ ಆಟಗಾರರು ನಂತರದ ಬೋ‌ರ್ಡ್‌ಗಳಲ್ಲಿ ಹಿನ್ನಡೆ ಕಾಣಬೇಕಾಯಿತು. ರಾಷ್ಟ್ರೀಯ ಚಾಂಪಿಯನ್ ಜಿಎಂ ಸೇತುರಾಮನ್ (2594) ಎರಡನೇ ಬೋರ್ಡ್‌ನಲ್ಲಿ ವಿ.ರಾಘವ್ (2150) ಜೊತೆ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು. ನಾಲ್ಕನೇ ಬೋರ್ಡ್‌ನಲ್ಲಿ ಅನುಭವಿ ಜಿಎಂ ದೀಪ್ತಾಯನ ಘೋಷ್‌ (ಪಶ್ಚಿಯ ಬಂಗಾಳ, ರೇಟಿಂಗ್‌ 2568) 52 ನಡೆಗಳ ನಂತರ ಸಾತ್ವಿಕ್ (ರೇಟಿಂಗ್ 2142) ಜೊತೆ ‘ಡ್ರಾ’ ಒಪ್ಪಂದಕ್ಕೆ ಸಹಿ ಮಾಡಬೇಕಾಯಿತು. ಕಳೆದ ತಿಂಗಳು ಸ್ಪೇನ್‌ನ ಲಾರ್ಕಾದಲ್ಲಿ ಮೂರು ಟೂರ್ನಿಗಳಲ್ಲಿ ಆಡಿದ್ದ ಸಾತ್ವಿಕ್ 480 ರೇಟಿಂಗ್ ಪಾಯಿಂಟ್ಸ್ ಸಂಪಾದಿಸಿದ್ದರು.ಏಳನೇ ಬೋರ್ಡ್‌ನಲ್ಲಿ ಜಿಎಂ ಎಂ.ಆರ್‌.ಲಲಿತ್‌ ಬಾಬು, ಮಹಾರಾಷ್ಟ್ರದ ಗೌರವ್‌ ಜಾಗಡೆ ಜೊತೆ, ಹತ್ತನೇ ಬೋರ್ಡ್‌ನಲ್ಲಿ ಆಂಧ್ರಪ್ರದೇಶದ ಪ್ರಥ್ವಿ ಕುಮಾರ್, ಬಂಗಾಳದ ಜಿಎಂ ಸಯಾಂತನ ದಾಸ್ ಅವರ ಜೊತೆ ಪಾಯಿಂಟ್‌ ಹಂಚಿಕೊಳ್ಳಬೇಕಾಯಿತು. ಮೊದಲ ಬೋರ್ಡ್‌ನಲ್ಲಿ ಜಿಎಂ ಅಭಿಜಿತ್‌ ಗುಪ್ತಾ, ಕರ್ನಾಟಕದ ಅಪಾರ್ ಸಕ್ಸೇನಾ ವಿರುದ್ಧ, ಇಂಗ್ಲೆಂಡ್‌ನ ನೈಜೆಲ್‌ ಶಾರ್ಟ್‌ ಮೂರನೇ ಬೋರ್ಡ್‌ನಲ್ಲಿ ಐಎಂ ನಿಶಾ ಮೊಹತಾ ವಿರುದ್ಧ, ಬಂಗಾಳದ ಐಎಂ ಅರಣ್ಯಕ್ ಘೋಷ್‌, ಐದನೇ ಬೋರ್ಡ್‌ನಲ್ಲಿ ಮಹಾರಾಷ್ಟ್ರದ ಐಎಂ ಅನೂಪ್ ದೇಶಮುಖ್ ವಿರುದ್ಧ ಜಯಗಳಿಸಿದರು. ₹25 ಲಕ್ಷ ಬಹುಮಾನ ಹೊಂದಿರುವ ‘ಎಲೈಟ್‌’ ವಿಭಾಗದಲ್ಲಿ 31 ಗ್ರ್ಯಾಂಡ್‌ಮಾಸ್ಟರ್‌ಗಳು, ನಾಲ್ವರು ಡಬ್ಲ್ಯುಜಿಎಂ ಆಟಗಾರ್ತಿಯರು, 41 ಐಎಂ ಆಟಗಾರರು, 10 ಡಬ್ಲ್ಯುಐಎಂ ಆಟಗಾರ್ತಿಯರು ಒಳಗೊಂಡಂತೆ 210 ಮಂದಿ ಕಣದಲ್ಲಿದ್ದಾರೆ. ಒಟ್ಟು 18 ದೇಶಗಳ ಸ್ಪರ್ಧಿಗಳು ಇದ್ದಾರೆ. ಬೆಂಗಳೂರು ನಗರ ಜಿಲ್ಲಾ ಚೆಸ್‌ ಸಂಸ್ಥೆ ಈ ಟೂರ್ನಿಯನ್ನು ನಡೆಸುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.