ಶೂಟಿಂಗ್ ರೇಂಜ್ ತೊರೆಯಲು ರಾಣಾಗೆ ಸೂಚಿಸಿದ ಬೇಚಾಂಪ್ ನವದೆಹಲಿ : ಕರ್ಣಿ ಸಿಂಗ್ ಶೂಟಿಂಗ್ ರೇಂಜ್ ತೊರೆಯುವಂತೆ ಭಾರತದ ಹೈ ಪರ್ಫಾಮೆನ್ಸ್ ನಿರ್ದೇಶಕ ಪಿಯರೆ ಬೇಚಾಂಪ್ ತಮಗೆ ಹೇಳಿದರು ಎಂದು ಶೂಟಿಂಗ್ ಕೋಚ್ ಜಸ್ಪಾಲ್‌ ರಾಣಾ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಒಲಿಂಪಿಯನ್ ಮನು ಭಾಕರ್ ಅವರಿಗೆ ತರಬೇತುದಾರರಾಗಿದ್ದಾರೆ. ‘ಪ್ಯಾರಿಸ್ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವ ಮನು ಅವರ ತರಬೇತಿಯ ಮೇಲ್ವಿಚಾರಣೆಗಾಗಿ ಈ ರೇಂಜ್‌ಗೆ ಭೇಟಿ ನೀಡಿದ್ದೆ‘ ಎಂದು ರಾಣಾ ತಿಳಿಸಿದ್ದಾರೆ. ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆ (ಎನ್ಆರ್‌ಎಐ) ಜಾರಿಗೆ ತಂದ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ (ಎಸ್‌ಒಪಿ) ಅನ್ನು ಬೇಚಾಂಪ್ ಉಲ್ಲೇಖಿಸಿ, ರೇಂಜ್‌ನಿಂದ ಹೊರ ಹೋಗಬೇಕೆಂದರು ಎಂದು ರಾಣಾ ಹೇಳಿದರು. ‘ಶೂಟರ್‌ಗಳು ಅಭ್ಯಾಸ ಮಾಡುತ್ತಿದ್ದ ಸ್ಥಳದಿಂದ ನಾನು ಸಾಕಷ್ಟು ದೂರದಲ್ಲಿ ನಿಂತಿದ್ದೆ. ಆದರೆ, ಅವರು ಬಂದು ಇಲ್ಲಿ ನಿಲ್ಲಬೇಡಿ, ರೇಂಜ್‌ ತೊರೆಯಬೇಕು. ಇಲ್ಲವಾದರೆ ನಾನು ಎನ್ಆರ್‌ಎಐ ನೊಂದಿಗೆ ತೊಂದರೆಗೆ ಸಿಲುಕುತ್ತೇನೆಂದರು‘ ಎಂದು ರಾಣಾ ತಿಳಿಸಿದರು. ‘ನನ್ನ ಬಗ್ಗೆ ಚಿಂತಿಸಬೇಡಿ ಎಂದು ಅವರಿಗೆ ಹೇಳಿದೆ. ನಾನು ಅರ್ಜುನ ಪ್ರಶಸ್ತಿ ವಿಜೇತ ಮತ್ತು ರಾಷ್ಟ್ರೀಯ ತರಬೇತುದಾರನಾಗಿದ್ದೇನೆ ಎಂದೂ ಹೇಳಿದೆ. ಆದರೆ, ಈಗ ನೀವು ರಾಷ್ಟ್ರೀಯ ತರಬೇತುದಾರನಲ್ಲ. ಆದ್ದರಿಂದ ದಯವಿಟ್ಟು ಹೊರಹೋಗಿ ಎಂದರು. ನನ್ನನ್ನು ತಡೆಯಲು ಅವರು ಯಾರು? ಅವರ ಹಿನ್ನೆಲೆ ಏನು?‘ ಎಂದು ರಾಣಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎನ್ಆರ್‌ಎಐ ಅಧ್ಯಕ್ಷ ಕಾಳಿಕೇಶ್ ಸಿಂಗ್ ದೇವ್ ಅವರಿಗೆ ಪತ್ರ ಬರೆಯುವುದಾಗಿ ಮತ್ತು ಈ ವಿಷಯದ ಬಗ್ಗೆ ಪ್ರಧಾನಿ ಕಚೇರಿಗೆ (ಪಿಎಂಒ) ತಿಳಿಸುವುದಾಗಿ ರಾಣಾ ಹೇಳಿದರು. ‘ಅವರಿಗೆ (ಬೇಚಾಂಪ್) ಭಾರತೀಯ ಶೂಟಿಂಗ್ ಬಗ್ಗೆ ಏನು ತಿಳಿದಿದೆ? ನನಗೆ ಹೇಳಿದ ಬಳಿಕ, ಅಭ್ಯಾಸ ಮಾಡುತ್ತಿದ್ದ ಮನು ಬಳಿ ತೆರಳಿ, ನಿಮ್ಮ ತರಬೇತುದಾರರಿಗೆ ರೇಂಜ್‌ನಿಂದ ಹೊರಹೋಗಲು ಹೇಳಿ’ ಎಂದರು. ನೀವು ಊಹಿಸಬಲ್ಲಿರಾ?’ ರಾಣಾ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎನ್ಆರ್‌ಎಐ, ಕ್ರೀಡೆಯ ಉತ್ತಮ ಹಿತದೃಷ್ಟಿಯಿಂದ ಶಿಬಿರಗಳು ಹಾಗೂ ಸ್ಪರ್ಧೆಗಳ ಸಮಯದಲ್ಲಿ ಎಸ್ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಶೂಟರ್‌ಗಳು ಮತ್ತು ವೈಯಕ್ತಿಕ ತರಬೇತುದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.