ಕ್ರಿಕೆಟ್‌: ಕರ್ನಾಟಕದ ವನಿತೆಯರಿಗೆ ಸುಲಭ ಜಯ ಕಟಕ್: ಮಿಥಿಲಾ ವಿನೋದ್‌, ನಿಕಿ ಪ್ರಸಾದ್‌ ಮತ್ತು ವೃಂದಾ ದಿನೇಶ್‌ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕದ ವನಿತೆಯರ ತಂಡವು ಬಿಸಿಸಿಐ ಸೀನಿಯರ್‌ ಮಹಿಳೆಯರ ಏಕದಿನ ಕ್ರಿಕೆಟ್‌ ಟ್ರೋಫಿ ಟೂರ್ನಿಯಲ್ಲಿ ಬಿಹಾರ ತಂಡವನ್ನು ಮಣಿಸಿತು. ಇಲ್ಲಿನ ಎಂಜಿಎಂ ಸ್ಕೂಲ್‌ ಅಫ್‌ ಸ್ಪೋರ್ಟ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 153 ರನ್‌ಗಳ ಸುಲಭ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259 ರನ್‌ ಗಳಿಸಿತು. ನಿಕಿ ಪ್ರಸಾದ್‌ (58; 93ಎ, 4x1), ವೃಂದಾ ದಿನೇಶ್‌ (52; 68ಎ, 4x6) ಮತ್ತು ಮಿಥಿಲಾ ವಿನೋದ್‌ (ಔಟಾಗದೆ 61; 34ಎ, 4x9, 6x1) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಬಿಹಾರ ತಂಡದ ಪಿ. ಪ್ರಿಯಾ ಮತ್ತು ರಚನಾ ಸಿಂಗ್‌ ಕ್ರಮವಾಗಿ ನಾಲ್ಕು ಮತ್ತು ಎರಡು ವಿಕೆಟ್‌ ಪಡೆದರು. ಗುರಿಯನ್ನು ಬೆನ್ನಟ್ಟಿದ ಬಿಹಾರ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 106 ರನ್‌ ಗಳಿಸಲಷ್ಟೇ ಶಕ್ತವಾಯಿತು. 16 ರನ್‌ ಗಳಿಸಿದ ಪ್ರಗತಿ ಸಿಂಗ್‌ ಅವರು ಬಿಹಾರದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಕರ್ನಾಟಕದ ಪುಷ್ಪಾ ಕಿರೇಸೂರ್ ಮತ್ತು ಚಂದು ವಿ. ತಲಾ ಎರಡು ವಿಕೆಟ್‌ ಪಡೆದರು. ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259 (ನಿಕಿ ಪ್ರಸಾದ್‌ 58, ವೃಂದಾ ದಿನೇಶ್‌ 52, ಮಿಥಿಲಾ ವಿನೋದ್‌ ಔಟಾಗದೆ 61; ರಚನಾ ಸಿಂಗ್‌ 54ಕ್ಕೆ 2, ಪಿ. ಪ್ರಿಯಾ 43ಕ್ಕೆ 4). ಬಿಹಾರ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 106 (ಪುಷ್ಪಾ ಕಿರೇಸೂರ್ 21ಕ್ಕೆ 2, ಚಂದು ವಿ. 10ಕ್ಕೆ 2). ಫಲಿತಾಂಶ: ಕರ್ನಾಟಕಕ್ಕೆ 153 ರನ್‌ ಜಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.