ಹಾಕಿ ಫೈವ್ಸ್‌ ವಿಶ್ವಕಪ್: ಕ್ವಾರ್ಟರ್‌ಗೆ ಭಾರತ ಮಹಿಳಾ ತಂಡ ಮಸ್ಕತ್‌: ನಮೀಬಿಯಾವನ್ನು 7-2 ಗೋಲುಗಳಿಂದ ಮಣಿಸಿದ ಭಾರತ ತಂಡ, ಎಫ್ಐಎಚ್ ಮಹಿಳಾ ಹಾಕಿ ಫೈವ್ಸ್‌ ವಿಶ್ವಕ‍ಪ್‌ನಲ್ಲಿ ಗುರುವಾರ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದೆ. ಇದು ‘ಸಿ’ ಗುಂಪಿನಲ್ಲಿ ಭಾರತ ತಂಡದ ಸತತ ಮೂರನೇ ಗೆಲುವಾಗಿದೆ. ಶುಕ್ರವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ 'ಡಿ' ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮುನ್ನ ಪೋಲೆಂಡ್ ವಿರುದ್ಧ 5-4 ಗೋಲುಗಳ ಅಂತರದಲ್ಲಿ ಜಯ ಸಾಧಿಸಿದ್ದ ಭಾರತ, ನಂತರದ ಪಂದ್ಯದಲ್ಲಿ ಅಮೆರಿಕವನ್ನು 7-3ರಿಂದ ಮಣಿಸಿತ್ತು. ಉಪನಾಯಕಿ ಮಹಿಮಾ ಚೌಧರಿ (3ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಮೇಲುಗೈ ಸಾಧಿಸಿತು. ಒಂದು ನಿಮಿಷದ ನಂತರ ದೀಪಿಕಾ ಸೊರೆಂಗ್ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದರು. ಮೊದಲಾರ್ಧದಲ್ಲಿ ಹೆಚ್ಚಿನ ಗೋಲುಗಳು ದಾಖಲಾಗಲಿಲ್ಲ. ಆದರೆ, ಭಾರತ ಆಟಗಾರ್ತಿಯರು ಆಟದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ದ್ವಿತೀಯಾರ್ಧದ ಆರಂಭದಲ್ಲಿ ನಮೀಬಿಯಾ ಪರ ಜೀವಂಕಾ ಕ್ರುಗರ್ (18ನೇ ನಿಮಿಷ) ಖಾತೆ ತೆರೆದರು. ಆದರೆ, ಭಾರತದ ಮಹಿಮಾ ಚೌಧರಿ (19ನೇ ನಿಮಿಷ) ಎರಡನೇ ಗೋಲು ಗಳಿಸಿದರು. ರುತಾಜಾ ದಾದಾಸೊ ಪಿಸಾಲ್ (22ನೇ ನಿಮಿಷ) ಮತ್ತು ಅಕ್ಷತಾ ಅಬಾಸೊ ಧೆಕಲೆ (23ನೇ ನಿಮಿಷ) ಎರಡು ನಿಮಿಷಗಳಲ್ಲಿ ಭಾರತದ ಪರ ಗೋಲು ಗಳಿಸಿದರೆ, ದೀಪಿಕಾ (26ನೇ ನಿಮಿಷ) ಎರಡನೇ ಗೋಲು ಬಾರಿಸಿ ಭಾರತಕ್ಕೆ 6-1ರ ಮುನ್ನಡೆ ತಂದುಕೊಟ್ಟರು. ಭಾರತದ ಪರ ಅಜ್ಮಿನಾ ಕುಜುರ್ (28ನೇ ನಿಮಿಷ) ಗೋಲು ಗಳಿಸಿದರೆ, ನಮೀಬಿಯಾ ಪರ ಆಂಥಿಯಾ ಕೊಟ್ಜೆ (30ನೇ ನಿಮಿಷ) ಎರಡನೇ ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.