ಯುವ ಪ್ರತಿಭಾನ್ವಿತ ಶೂಟರ್ ರೈಝಾ ದಿಲ್ಲೋನ್‌ಗೆ ಪ್ಯಾರಿಸ್‌ ಒಲಿಂಪಿಕ್‌ ಟಿಕೆಟ್ ಕುವೈತ್: ಯುವಪ್ರತಿಭಾನ್ವಿತ ಶೂಟರ್ ರೈಝಾ ದಿಲ್ಲೋನ್ ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಶನಿವಾರ ಅರ್ಹತೆ ಗಳಿಸಿದರು. ಇಲ್ಲಿ ನಡೆಯುತ್ತಿರುವ ಏಷ್ಯಾ ಒಲಿಂಪಿಕ್ ಅರ್ಹತಾ ಶಾಟ್‌ಗನ್ ವಿಭಾಗದ ಮಹಿಳೆಯರ ಸ್ಕೀಟ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ರೈಝಾ ಈ ಸಾಧನೆ ಮಾಡಿದರು. ಇದರೊಂದಿಗೆ ಒಲಿಂಪಿಕ್ ಟಿಕೆಟ್ ಗಿಟ್ಟಿಸಿದ ಭಾರತದ 18ನೇ ಶೂಟರ್ ಆದರು. 19 ವರ್ಷದ ರೈಝಾ ಆರು ಸ್ಪರ್ಧಿಗಳಿದ್ದ ಫೈನಲ್‌ ಸುತ್ತಿನ ಆರಂಭದಲ್ಲಿ ಮುನ್ನಡೆಯಲ್ಲಿದ್ದರು. ಆದರೆ ಸ್ಪರ್ಧೆಯ ಉತ್ತರಾರ್ಧದಲ್ಲಿ ಮೂರು ಬಾರಿ ಗುರಿ ಕಟ್ಟುವಲ್ಲಿ ವಿಫಲರಾದರು. ಇದರಿಂದಾಗಿ ಚೀನಾದ ಜಿನಿಮೀ ಗಾವೊ ಅವರು 60 ಶಾಟ್‌ಗಳ ಪೈಕಿ 56 ಬಾರಿ ನಿಖರ ಗುರಿ ಸಾಧನೆ ಮಾಡಿ ಚಿನ್ನ ಗೆದ್ದರು. ರೈಝಾ 52 ಹಿಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು. ಇಬ್ಬರೂ ಪ್ಯಾರಿಸ್‌ ಟಿಕೆಟ್ ಗಳಿಸಿದರು. ಭಾರತದವರೇ ಆದ ಮಹೇಶ್ವರಿ ಚವ್ಹಾಣ್ ಅವರು ಇದೇ ವಿಭಾಗದಲ್ಲಿ 43 ಅಂಕ ಗಳಿಸಿ ಕಂಚು ಪಡೆದರು. ಗಣೆಮತ್ ಶೇಖಾನ್ ಅವರು ಫೈನಲ್‌ನಲ್ಲಿ 30 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಗಣೇಮತ್ ಅವರು ಕ್ವಾಲಿಫಿಕೇಷನ್‌ನಲ್ಲಿ 117 ಹಾಗೂ ಮಹೇಶ್ವರಿ 115 ಅಂಕಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿ ಫೈನಲ್‌ ಪ್ರವೇಶಿಸಿದ್ದರು. ರೈಝಾ ಅವರು ಅರ್ಹತಾ ಸುತ್ತಿನಲ್ಲಿ ಆರನೇ ಸ್ಥಾನ ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.