ಫಲಿತಾಂಶ ಒಪ್ಪಿಕೊಂಡು ಮುಂದುವರಿಯಬೇಕು: ಮಹಿಳೆಯರ ತಂಡಕ್ಕೆ ಹಾಕಿ ಇಂಡಿಯಾ ರಾಂಚಿ: ಭಾರತ ಮಹಿಳೆಯರ ಹಾಕಿ ತಂಡವು ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸುವಲ್ಲಿ ವಿಫಲವಾಗಿದೆ. ಶುಕ್ರವಾರ ಇಲ್ಲಿ ನಡೆದ ಒಲಿಂಪಿಕ್ ಕ್ವಾಲಿಫೈಯರ್ ಹಾಕಿ ಟೂರ್ನಿಯಲ್ಲಿ ಮೂರನೇ ಸ್ಥಾನಕ್ಕಾಗಿ ಪಂದ್ಯದಲ್ಲಿ ಜಪಾನ್ ಎದುರು ಸೋತ ಸವಿತಾ ಪೂನಿಯಾ ಬಳಗವು ಅವಕಾಶ ಕೈಚೆಲ್ಲಿತು. 2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ತಂಡವು ಈ ಬಾರಿಯೂ ಒಲಿಂಪಿಕ್ ಅಂಗಳದಲ್ಲಿ ಆಡುವ ಭರವಸೆ ಮೂಡಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಹಾಕಿ ಇಂಡಿಯಾದ ಮಹಾಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್, ‘ನಮ್ಮ ಆಟಗಾರ್ತಿಯರು ಬಹಳ ಚೆನ್ನಾಗಿ ಆಡಿದರು. ಆದರೂ ಸೋತಿದ್ದು ದುರದೃಷ್ಟಕರ. ಇಡೀ ಟೂರ್ನಿಯಲ್ಲಿ ಉತ್ಕೃಷ್ಠ ಆಟವನ್ನು ಪ್ರದರ್ಶಿಸಿದರು. ಸೋಲು –ಗೆಲುವುಗಳು ಕ್ರೀಡೆಯ ಅವಿಭಾಜ್ಯ ಅಂಗಗಳು. ಫಲಿತಾಂಶವನ್ನು ಒಪ್ಪಿಕೊಳ್ಳಬೇಕು ಮತ್ತು ಮುಂದುವರಿಯಬೇಕು’ ಎಂದರು. ‘ಸೆಮಿಫೈನಲ್‌ನಲ್ಲಿ ಜರ್ಮನಿಯ ವಿರುದ್ಧ ನಮ್ಮ ತಂಡವು ಉತ್ತಮವಾಗಿ ಆಡಿತ್ತು. ಅದರಲ್ಲಿ ಗೆದ್ದುಬಿಡಬೇಕಿತ್ತು. ಅಲ್ಲಿ ನಮ್ಮವರಿಂದ ಆದ ಒಂದೆರಡು ತಪ್ಪುಗಳಿಂದಾಗಿ ಸೋಲಬೇಕಾಯಿತು. ಒಟ್ಟಾರೆ ಪ್ಯಾರಿಸ್ ಟಿಕೆಟ್ ಕೈತಪ್ಪಿದ್ದು ಬೇಸರದ ಸಂಗತಿ. ಬದಲಾವಣೆಗಳ ಕುರಿತು ಈಗಲೇ ಏನೂ ಹೇಳಲಾಗದು. ತ್ವರಿತವಾಗಿ ಯಾವುದೇ ನಿರ್ಧಾರ ಕೈಗೊಳ್ಳಲಾಗದು. ಮುಂದಿನ ತಿಂಗಳು ಭುವನೇಶ್ವರ್ ಮತ್ತು ರೂರ್ಕೆಲಾದಲ್ಲಿ ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯ ಬಗ್ಗೆ ಗಮನ ಹರಿಸಬೇಕಿದೆ. ಮುಂದಿನ ಒಲಿಂಪಿಕ್ ಕೂಟಕ್ಕೆ ಸಿದ್ಧವಾಗಲು ನಮಗೆ ಇನ್ನೂ ನಾಲ್ಕು ವರ್ಷಗಳ ಸಮಯ ಇದೆ.ಈ ಅವಧಿಯಲ್ಲಿ 2028ರ ಒಲಿಂಪಿಕ್ ಕೂಟಕ್ಕೆ ಅರ್ಹತೆ ಪಡೆದು ಪದಕವನ್ನೂ ಜಯಿಸಲು ಸಂಪೂರ್ಣ ತಯಾರಿ ನಡೆಸುತ್ತೇವೆ’ ಎಂದರು. ಭಾರತ ತಂಡದ ಸೋಲಿನ ಕುರಿತು ಪ್ರತಿಕ್ರಿಯಿಸಿರುವ ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕಿ, ‘ಕೋಚ್ ಕುರಿತು ಈಗಲೇ ನಾವು ಏನೂ ಯೋಚಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಕೆಲವು ಮಹತ್ವದ ಟೂರ್ನಿಗಳಿವೆ. ಅವುಗಳಮೇಲೆ ನಮ್ಮ ಗಮನ ಇದೆ’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.