ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್‌: ಗುಕೇಶ್‌ಗೆ ಜಯ, ಲೀಡ್‌ನಲ್ಲಿ ಗಿರಿ ವಿಜ್ಕ್ ಆನ್‌ ಝೀ (ನೆದರ್ಲೆಂಡ್ಸ್‌): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಉತ್ತಮ ಪ್ರದರ್ಶನ ನೀಡಿ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಚಾಲೆಂಜರ್ ಇಯಾನ್ ನಿಪೊಮ್‌ನಿಯಾಷಿ ಅವರನ್ನು ಶುಕ್ರವಾರ ಸೋಲಿಸಿದರು. ಗುಕೇಶ್ ಈಗ 5 ಸುತ್ತುಗಳಿಂದ 2.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಭಾರತದ ಇನ್ನೊಬ್ಬ ತಾರೆ ಆರ್‌.ಪ್ರಜ್ಞಾನಂದ ಅವರು ಹಾಲಿ ಚಾಂಪಿಯನ್ ಅನೀಶ್ ಗಿರಿ ಅವರ ಜೊತೆ ‘ಡ್ರಾ’ ಮಾಡಿಕೊಂಡರು. ‘ಡ್ರಾ’ ನಂತರವೂ ಗಿರಿ 5 ಸುತ್ತುಗಳಿಂದ 4 ಪಾಯಿಂಟ್ಸ್ ಸಂಗ್ರಹಿಸಿ ಲೀಡ್‌ ಉಳಿಸಿಕೊಂಡಿದ್ದಾರೆ. ಎರಡು ಸುತ್ತಿನಲ್ಲಿ ಸೋತಿದ್ದ ಗುಕೇಶ್‌ಗೆ ಉತ್ತಮ ಆರಂಭ ದೊರಕಿರಲಿಲ್ಲ. ವಿದಿತ್‌ ಗುಜರಾತಿ ಸತತ ಐದನೇ ಪಂದ್ಯದಲ್ಲೂ ಪಾಯಿಂಟ್‌ ಹಂಚಿಕೊಂಡರು. ಅವರು ಮ್ಯಾಕ್ಸ್‌ ವಾರ್ಡರ್‌ಮನ್ ಜೊತೆ ‘ಡ್ರಾ’ ಮಾಡಿಕೊಂಡರು. ಪ್ರಜ್ಞಾನಂದ, ಅಲಿರೇಜಾ ಫಿರೋಜ್ (ಫ್ರಾನ್ಸ್) ಮತ್ತು ಉಜ್ಬೇಕಿಸ್ತಾನದ ಅಬ್ದುಸತ್ತಾರೊವ್ ನಾಡಿರ್ಬೆಕ್ ಅವರು ತಲಾ ಮೂರು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೂರ್ನಿಯ ಪ್ರಮುಖ ಅನಿರೀಕ್ಷಿತ ಫಲಿತಾಂಶದಲ್ಲಿ ಮಹಿಳಾ ವಿಶ್ವ ಚಾಂಪಿಯನ್ ಜು ವೆನ್‌ಜುನ್ (ಚೀನಾ) ಅವರು ಅಲಿರೇಜಾ ಅವರಿಗೆ ಆಘಾತ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.