ಚೆಸ್‌: ಮುನ್ನಡೆಯಲ್ಲಿ ಏಳು ಮಂದಿ ಬೆಂಗಳೂರು: ಅನುಭವಿ ಗ್ರ್ಯಾಂಡ್‌ಮಾಸ್ಟರ್‌ ನೈಜೆಲ್‌ ಶಾರ್ಟ್‌ (ಬ್ರಿಟನ್‌) ಸೇರಿದಂತೆ ಏಳು ಮಂದಿ ಆಟಗಾರರು, ಬೆಂಗಳೂರು ಇಂಟರ್‌ನ್ಯಾಷನಲ್‌ ಗ್ರ್ಯಾಂಡ್‌ಮಾಸ್ಟರ್ಸ್ ಓಪನ್ ಚೆಸ್‌ ಟೂರ್ನಿಯಲ್ಲಿ (ಕೆಟಗರಿ ಎ) ಮೂರನೇ ಸುತ್ತಿನ ನಂತರ ತಲಾ ಮೂರು ಪಾಯಿಂಟ್‌ಗಳೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ. ಮೊದಲ ಬೋರ್ಡ್‌ನಲ್ಲಿ ಅಗ್ರ ಶ್ರೇಯಾಂಕದ ಜಿಎಂ ಅಭಿಜಿತ್ ಗುಪ್ತಾ (2.5), ಕಪ್ಪು ಕಾಯಿಗಳಲ್ಲಿ ಆಡಿದ ಕರ್ನಾಟಕದ ಜಿಎಂ ತೇಜಕುಮಾರ್ (2.5) ಜೊತೆ 39ನೇ ನಡೆಯಲ್ಲಿ ‘ಡ್ರಾ’ ಮಾಡಿಕೊಳ್ಳಬೇಕಾಯಿತು. ಶಾರ್ಟ್‌ ಜೊತೆ ಕರ್ನಾಟಕದ ಗ್ರ್ಯಾಂಡ್‌ಮಾಸ್ಟರ್‌ ಪ್ರಣವ್ ಆನಂದ್, ಐಎಂ ಅಂಥೊನಿಯೊ ವಿಯಾನಿ ಡಿಕುನ್ಹ, ಬೆಲಾರಸ್‌ನ ಅಲೆಕ್ಸಿ ಫೆಡರೋವ್, ಪಶ್ಚಿಮ ಬಂಗಾಳದ ಐಎಂ ನೀಲೇಶ್ ಸಹಾ, ಮಹಾರಾಷ್ಟ್ರದ ಐಎಂ ಸಮ್ಮೇದ್ ಜಯಕುಮಾರ್, ಗೋವಾದ ಐಎಂ ಎಂನಿತೀಶ್ ಬೆಲೂರ್ಕರ್ ಅವರು ಮುನ್ನಡೆಯಲ್ಲಿರುವ ಇತರ ಆರು ಮಂದಿ. ಗಮನಸೆಳೆದ ಶ್ರೀಹರಿ: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ದಿನ ಎರಡು ಸುತ್ತುಗಳು ನಡೆದವು. ಎರಡನೇ ಸುತ್ತಿನ ಅನಿರೀಕ್ಷಿತ ಫಲಿತಾಂಶವೊಂದರಲ್ಲಿ ಪುದುಚೇರಿಯ ಎಲ್‌.ಶ್ರೀಹರಿ (2243) ಅವರು 14ನೇ ಶ್ರೆಯಾಂಕದ ಜಿಎಂ ಬೋರಿಸ್‌ ಸವಚೆಂಕೊ (ರಷ್ಯಾ, 2489) ಅವರಿಗೆ ಸೋಲಿನ ಆಘಾತ ನೀಡಿ ಗಮನ ಸೆಳೆದರು. ಬಿಹಾರದ ಸೌರಬ್ ಆನಂದ್‌, 9ನೇ ಶ್ರೇಯಾಂಕದ ಜಿಎಂ ಇನಿಯನ್ ಪಿ (ತಮಿಳುನಾಡು) ಜೊತೆ 31 ನಡೆಗಳಲ್ಲಿ ಡ್ರಾ ಮಾಡಿಕೊಂಡರು. ಮೂರನೇ ಸುತ್ತಿನ ‘ಟಾಪ್‌ ಬೋರ್ಡ್‌’ ಪಂದ್ಯಗಳಲ್ಲಿ, ನೈಜೆಲ್ ಶಾರ್ಟ್‌, ಗುಜರಾತ್‌ನ ಮೋಕ್ಷ್‌ ಅಮಿತ್‌ ದೋಶಿ (2) ವಿರುದ್ಧ, ಪ್ರಣವ್ ಆನಂದ್, ವಿಯೆಟ್ನಾಮಿನ ಜಿಎಂ ಎನ್ಗುಯೆನ್ ಡುಕ್‌ ಹೊ (2) ವಿರುದ್ಧ, ಅಲೆಕ್ಸಿ ಫೆಡರೋವ್, ಇರಾನ್‌ನ ಒಮಿದಿ ಆರ್ಯ (2) ವಿರುದ್ಧ, ನೀಲೇಶ್ ಸಹಾ, ಪಂಜಾಬ್‌ನ ಐಎಂ ದುಷ್ಯಂತ್ ಶರ್ಮಾ (2) ವಿರುದ್ಧ, ಸಮ್ಮೇದ್ ಜಯಕುಮಾರ್‌, ಪುದುಚೇರಿಯ ಶ್ರೀಹರಿ (2) ವಿರುದ್ಧ, ನೀತೀಶ್, ಮಹಾರಾಷ್ಟ್ರದ ಮಹೇಂದು ಜೈವೀರ್‌ (2) ವಿರುದ್ಧ, ಮಂಗಳೂರಿನ ವಿಯಾನಿ, ಕೇರಳದ ನಿತೀಶ್ ಬಾಬು (2) ವಿರುದ್ಧ ಜಯಗಳಿಸಿದರು. ಬಂಗಾಳದ ಅರಣ್ಯಕ್ ಘೋಷ್ (2.5) ಮತ್ತು ತಮಿಳುನಾಡಿನ ಜಿಎಂ ಆರ್‌.ಆರ್‌.ಲಕ್ಷ್ಮಣ್ (2.5) ನಡುವೆ, ತಮಿಳುನಾಡಿನ ಐಎಂ ಅಶ್ವಥ್ ಎಸ್‌. (2.5) ಮತ್ತು ಬಂಗಾಳದ ಜಿಎಂ ಮಿತ್ರಬಾ ಗುಹಾ (2.5) ನಡುವೆ ಪಂದ್ಯ ‘ಡ್ರಾ’ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.