ಶೋಯೆಬ್ ಜೊತೆ ವಿಚ್ಛೇದನ ಖಚಿತಪಡಿಸಿದ ಸಾನಿಯಾ ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಗೆ ವಿಚ್ಛೇದನ ನೀಡಿರುವುದನ್ನು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಕುಟುಂಬ ಖಚಿತಪಡಿಸಿದೆ. 41 ವರ್ಷದ ಮಲಿಕ್ ಅವರು ಪಾಕ್ ದೇಶದ ನಟಿ ಸನಾ ಜಾವೆದ್‌ ಅವರನ್ನು ವಿವಾಹ ಆಗಿರುವ ಚಿತ್ರವನ್ನು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಿರ್ಜಾ ಕುಟುಂಬವು ಪ್ರತಿಕ್ರಿಯಿಸಿದೆ. ‘ಸಾನಿಯಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ದೃಷ್ಟಿಯಿಂದ ದೂರವಿಟ್ಟಿದ್ದಾರೆ. ಆದರೂ ಶೋಯೆಬ್ ಮತ್ತು ಸಾನಿಯಾ ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದಿರುವುದನ್ನು ಹಂಚಿಕೊಳ್ಳುವ ಅವಶ್ಯಕತೆ ಇಂದು ಉದ್ಭವಿಸಿದೆ. ಶೋಯೆಬ್ ಅವರ ಹೊಸ ಜೀವನಕ್ಕೆ ಸಾನಿಯಾ ಶುಭ ಹಾರೈಸುತ್ತಾರೆ’ ಎಂದು ಮಿರ್ಜಾ ಕುಟುಂಬವು ಹೇಳಿಕೆ ಬಿಡುಗಡೆ ಮಾಡಿದೆ. ‘ಅವರ ಜೀವನದ ಈ ಸೂಕ್ಷ್ಮ ಅವಧಿಯಲ್ಲಿ, ಯಾವುದೇ ಊಹಾಪೋಹಗಳಲ್ಲಿ ತೊಡಗದಂತೆ ಮತ್ತು ಗೌಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಹಿತೈಷಿಗಳನ್ನು ವಿನಂತಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ‘ಮದುವೆ ಕಷ್ಟ, ವಿಚ್ಛೇದನ ಕಷ್ಟ. ಬೊಜ್ಜು ಕಷ್ಟ. ಫಿಟ್ ಆಗಿರುವುದು ಕಷ್ಟ, ನಿಮ್ಮ ಕಠಿಣ ಆಯ್ಕೆಯನ್ನು ಆರಿಸಿಕೊಳ್ಳಿ. ಸಾಲದಲ್ಲಿ ಸಿಲುಕುವುದು ಕಷ್ಟ. ಆರ್ಥಿಕವಾಗಿ ಶಿಸ್ತುಬದ್ಧರಾಗಿರುವುದು ಕಷ್ಟ. ನಿಮ್ಮ ಕಠಿಣ ಪರಿಶ್ರಮವನ್ನು ಆರಿಸಿ’ ಎಂದು ಸಾನಿಯಾ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸಂವಹನ ಕಷ್ಟ. ಆದರೆ ಯಾವುದೇ ಸಂವಹನ ಮಾಡದಿರುವುದೂ ಕಷ್ಟ. ಜೀವನ ಎಂದಿಗೂ ಸುಲಭವಲ್ಲ. ನಾನು ಯಾವಾಗಲೂ ಕಠಿಣವಾಗಿರುತ್ತೇನೆ. ಆದರೆ ಯಾವುದನ್ನಾದರೂ ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವುದು ಒಳಿತು’ ಎಂದು ಹೇಳಿದ್ದಾರೆ. 2010ರಲ್ಲಿ ಹೈದರಾಬಾದ್‌ನಲ್ಲಿ ಸಾನಿಯಾ ವಿವಾಹವಾಗಿದ್ದ ಶೋಯೆಬ್‌ಗೆ ಗಂಡು ಮಗುವಿದೆ. ಶೋಯೆಬ್‌ ಮತ್ತು ಸಾನಿಯಾ ಸಂಬಂಧದಲ್ಲಿ ಒಡುಕು ಉಂಟಾಗಿದ್ದು, ಅವರು ಬೇರೆಯಾಗುತ್ತಾರೆ ಎಂಬ ವದಂತಿ 2022ರಿಂದ ಕೇಳಿ ಬಂದಿತ್ತು. ಕೆಲವು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ನೆಲೆಸಿದ್ದರು. ಮಲಿಕ್ ಕೆಲ ದಿನಗಳ ಹಿಂದೆ ಇನ್‌ಸ್ಟಾದಲ್ಲಿ ಸಾನಿಯಾ ಅವರನ್ನು ‘ಅನ್‌ಫಾಲೊ’ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.