ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪಾಕಿಸ್ತಾನ ಹಾಕಿ ತಂಡ ವಿಫಲ ಕರಾಚಿ: ನಾನಾ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನದ ಹಾಕಿ ತಂಡ, ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಒಮಾನ್‌ನಲ್ಲಿ ನಡೆದ ಒಲಿಂಪಿಕ್‌ ಅರ್ಹತಾ ಟೂರ್ನಿಯ ಮೂಲಕ ಪ್ಯಾರಿಸ್‌ಗೆ ಟಿಕೆಟ್ ಪಡೆಯುವ ತಂಡದ ಯತ್ನ ಈಡೇರಿಲ್ಲ. ತಂಡದ ವೈಫಲ್ಯಕ್ಕೆ ದೇಶದ ಮಾಜಿ ಘಟಾನುಘಟಿ ಆಟಗಾರರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕತಾರ್‌ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಅವಕಾಶವಿತ್ತು. ಆದರೆ ಸೆಮಿಫೈನಲ್‌ನಲ್ಲಿ ಜರ್ಮನಿಗೆ 0–4 ಗೋಲುಗಳಿಂದ ಸೋತಿದ್ದ ಪಾಕಿಸ್ತಾನ, ನಂತರ ಮೂರು–ನಾಲ್ಕನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ 2–3 ಗೋಲುಗಳಿಂದ ನ್ಯೂಜಿಲೆಂಡ್ ಎದುರು ಪರಾಭವ ಕಂಡಿತು. 2012ರ (ಲಂಡನ್‌)ರಲ್ಲಿ ಪಾಕಿಸ್ತಾನ ಕೊನೆಯ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿತ್ತು. ಆಗ ಏಳನೇ ಸ್ಥಾನ ಪಡೆದಿತ್ತು. ತಂಡ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಎಂಟು ಪದಕಗಳನ್ನು ಜಯಿಸಿದ್ದು, ಇದರಲ್ಲಿ ಮೂರು (1960, 1968 ಮತ್ತು 1984) ಚಿನ್ನದ ಪದಕಗಳು ಸೇರಿವೆ. ಆದರೆ 2010ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದ ನಂತರ ಪಾಕ್ ತಂಡ ಯಾವುದೇ ಪ್ರಮುಖ ಟೂರ್ನಿಯಲ್ಲಿ ಯಶಸ್ಸು ಪಡೆದಿಲ್ಲ. ಪಾಕಿಸ್ತಾನ ಹಾಕಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಣಕಾಸು ಸಮಸ್ಯೆ ಇದರಲ್ಲಿ ಮುಖ್ಯವಾಗಿದೆ. ಆಟಗಾರರಿಗೆ ಭತ್ಯೆ ಮತ್ತು ಗುತ್ತಿಗೆ ಪ್ರಕಾರ ವೇತನ ಪಾವತಿಸಲೂ ಆಗಿಲ್ಲ. ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನ ತಂಡ ಹಲವು ಅಂತರರಾಷ್ಟ್ರೀಯ ಟೂರ್ನಿಗಳಿಂದ ಹಿಂದೆಸರಿದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.