ಪ್ಯಾರಿಸ್ ಒಲಿಂಪಿಕ್ಸ್‌ | ಪುರುಷರ ಹಾಕಿ: ‘ಬಿ‘ ಗುಂಪಿನಲ್ಲಿ ಭಾರತ ಲುಸಾನ್ (ಸ್ವಿಟ್ಜರ್‌ಲೆಂಡ್‌): ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಈ ವರ್ಷದ ಪ್ಯಾರಿಸ್ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಸ್ಪರ್ಧೆಯಲ್ಲಿ ಕಠಿಣ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. 41 ವರ್ಷದ ಬಳಿಕ ಟೋಕಿಯೊದಲ್ಲಿ ಕಂಚಿನ ಪದಕ ಗೆದ್ದ ಎಂಟು ಬಾರಿಯ ಚಾಂಪಿಯನ್ ಭಾರತ, ಹಾಲಿ ಒಲಿಂಪಿಕ್ ಚಾಂಪಿಯನ್ ಮತ್ತು ವಿಶ್ವದ ನಂ.2 ಬೆಲ್ಜಿಯಂ, ಪ್ರಬಲ ಆಸ್ಟ್ರೇಲಿಯಾ, ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ತಂಡಗಳೊಂದಿಗೆ ಸೇರಿಕೊಂಡಿದೆ. ಬೆಲ್ಜಿಯಂ ಮತ್ತು ನೆದರ್ಲೆಂಡ್‌ ನಂತರ ಭಾರತ ಪ್ರಸ್ತುತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಹಿಂದೆ ಟೋಕಿಯೊ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾವನ್ನು ಸೋಲಿಸುವುದು ಕಷ್ಟಕರವಾಗಿತ್ತು. 'ಎ' ಗುಂಪಿನಲ್ಲಿ ನೆದರ್ಲೆಂಡ್ಸ್, ಜರ್ಮನಿ, ಗ್ರೇಟ್ ಬ್ರಿಟನ್, ಸ್ಪೇನ್, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಎಫ್ಐಎಚ್ ಹಾಕಿ ಒಲಿಂಪಿಕ್ ಅರ್ಹತಾ ಪಂದ್ಯಗಳು ಪೂರ್ಣಗೊಂಡ ನಂತರ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ ಪುರುಷರ ಮತ್ತು ಮಹಿಳಾ ಹಾಕಿ ಸ್ಪರ್ಧೆಯ ಗುಂಪುಗಳನ್ನು ಭಾನುವಾರ ಪ್ರಕಟಿಸಿದೆ. ಭಾರತ ವನಿತೆಯರ ತಂಡ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾಯಿತು. ಶುಕ್ರವಾರ ರಾಂಚಿಯಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಜಪಾನ್ ವಿರುದ್ಧ 0-1 ಅಂತರದಿಂದ ಸೋತು ನಾಲ್ಕನೇ ಸ್ಥಾನ ಪಡೆಯಿತು. ಜರ್ಮನಿ, ಅಮೆರಿಕ ಮತ್ತು ಜಪಾನ್ ಒಲಿಂಪಿಕ್ಸ್‌ಗೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ. 'ಎ' ಗುಂಪಿನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ನೆದರ್ಲೆಂಡ್ಸ್, ಬೆಲ್ಜಿಯಂ, ಜರ್ಮನಿ, ಜಪಾನ್, ಚೀನಾ ಮತ್ತು ಆತಿಥೇಯ ಫ್ರಾನ್ಸ್ ಸ್ಥಾನ ಪಡೆದರೆ, 'ಬಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಅರ್ಜೆಂಟೀನಾ, ಗ್ರೇಟ್ ಬ್ರಿಟನ್, ಸ್ಪೇನ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ. ಭಾಗವಹಿಸುವ ತಂಡಗಳಿಗೆ ಎಫ್ಐಎಚ್ ವಿಶ್ವ ಶ್ರೇಯಾಂಕದ ಆಧಾರದ ಮೇಲೆ ಆಯಾ ಗುಂಪುಗಳನ್ನು ಹಂಚಿಕೆ ಮಾಡಲಾಗಿದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ 12 ತಂಡಗಳು ಒಲಿಂಪಿಕ್ಸ್‌ ಕೂಟಕ್ಕೆ ಅರ್ಹತೆ ಪಡೆದಿವೆ. ಪುರುಷರ ಮತ್ತು ಮಹಿಳೆಯರ ಗುಂಪಿನಿಂದ ಅಗ್ರ ನಾಲ್ಕು ತಂಡಗಳು ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆಯುತ್ತವೆ. ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದ್ದು, ಹಾಕಿ ಪಂದ್ಯಗಳು ಜುಲೈ 27 ರಿಂದ ಆಗಸ್ಟ್ 9 ರವರೆಗೆ ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.